ಬಿಹಾರ ವಿಧಾನಸಭಾ ಚುನಾವಣೆ: ಜೆಡಿಯು-ಬಿಜೆಪಿ ನಡುವೆ ಸ್ಥಾನ ಹಂಚಿಕೆ ಒಪ್ಪಂದ

Update: 2020-10-06 17:46 GMT

ಹೊಸದಿಲ್ಲಿ,ಅ.6: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿ ಮಂಗಳವಾರ ಸ್ಥಾನ ಹಂಚಿಕೆ ಒಪ್ಪಂದವನ್ನು ಮಾಡಿಕೊಂಡಿವೆ.

ಒಟ್ಟು 243 ವಿಧಾನಸಭಾ ಸ್ಥಾನಗಳ ಪೈಕಿ ಜೆಡಿಯು 122 ಮತ್ತು ಬಿಜೆಪಿ 121 ಸ್ಥಾನಗಳಿಗೆ ಸ್ಪರ್ಧಿಸಲಿವೆ. ಜೆಡಿಯು ತನ್ನ ಕೋಟಾದಲ್ಲಿ ಏಳು ಸ್ಥಾನಗಳನ್ನು ಎಚ್‌ಎಎಮ್‌ಗೆ ನೀಡಲಿದೆ. ಬಿಜೆಪಿಯೂ ವಿಕಾಸಶೀಲ ಕಿಸಾನ್ ಪಾರ್ಟಿಯೊಂದಿಗೆ ಸ್ಥಾನಗಳನ್ನು ಹಂಚಿಕೊಳ್ಳಲಿದೆ ಎಂದು ಒಪ್ಪಂದದ ವಿವರಗಳನ್ನು ಪ್ರಕಟಿಸಿದ ನಿತೀಶ್ ಕುಮಾರ್ ತಿಳಿಸಿದರು.

ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಮೈತ್ರಿಕೂಟದ ನೇತೃತ್ವವನ್ನು ವಹಿಸಲಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಸುಶೀಲಕುಮಾರ ಮೋದಿ ಅವರು,ಬಿಜೆಪಿ ಮತ್ತು ಜೆಡಿಯು ಎಷ್ಟೇ ಸಂಖ್ಯೆಗಳಲ್ಲಿ ಸ್ಥಾನಗಳನ್ನು ಗೆಲ್ಲಲಿ, ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದರು.

ಎಲ್‌ಜೆಪಿ ತನ್ನ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳನ್ನು ಬಳಸುವುದನ್ನು ನಿರ್ಬಂಧಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಕೋರಲಿದೆ ಎಂದೂ ಅವರು ತಿಳಿಸಿದರು.

ನಿತೀಶ್ ಕುಮಾರ್ ಅವರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಎಲ್‌ಜೆಪಿ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ತೊರೆದಿದೆ. ತಾನು ಜೆಡಿಯು ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿಯುವುದಾಗಿ ಮತ್ತು ಬಿಜೆಪಿಯನ್ನು ಬೆಂಬಲಿಸುವುದಾಗಿ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಹೇಳಿತ್ತು.

ತನ್ಮಧ್ಯೆ ತಾನು ಎಲ್‌ಜೆಪಿ ಜೊತೆ ಯಾವುದೇ ತೆರೆಮರೆಯ ವೆುತ್ರಿಯನ್ನು ಮಾಡಿಕೊಳ್ಳುವುದಿಲ್ಲ ಮತ್ತು ನಿತೀಶ ಕುಮಾರ ನೇತೃತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಬಿಜೆಪಿ ತಿಳಿಸಿದೆ. ಬಿಹಾರದಲ್ಲಿ ಅ.28,ನ.3 ಮತ್ತು ನ.7ರಂದು ಮತದಾನ ಜರುಗಲಿದ್ದು,ನ.10ರಂದು ಮತಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News