ಹತ್ರಸ್ ಪ್ರಕರಣ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯ: ಮಂಗಳೂರಿನಲ್ಲಿ ದಸಂಸ ನೇತೃತ್ವದಲ್ಲಿ ಧರಣಿ

Update: 2020-10-07 07:36 GMT

ಮಂಗಳೂರು, ಅ.7: ಉತ್ತರ ಪ್ರದೇಶದ ಹತ್ರಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ವಿವಿಧ ಜನಪರ ಸಂಘಟನೆಗಳಿಂದ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಧರಣಿ ನಡೆಯಿತು. 

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾತ್ ವಿರುದ್ಧ ಘೋಷಣೆಗಳನ್ನು ಕೂಗಿದ ಧರಣಿನಿರತರು ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಿಂದ ತನಿಖೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ನೊಂದ ಕುಟುಂಬಕ್ಕೆ ಕನಿಷ್ಠ ಒಂದು ಕೋಟಿ ರೂ. ಪರಿಹಾರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಒತ್ತಾಯಿಸಿದರು.

ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ದಸಂಸನ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್, ದಲಿತ ಯುವತಿಯನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣವನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ, ಮನು ಸಂಸ್ಕೃತಿ ಜಾರಿಗೆ ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗೆ, ರಾಮಾಯಣ ಬರೆದ ವಾಲ್ಮೀಕಿ ಸಮುದಾಯದ ಯುವತಿಯ ಬಗ್ಗೆ ಕಾಳಜಿಯೇ ಇಲ್ಲವಾಗಿದೆ. ಸಮಾನತೆ, ಸಂವಿಧಾನ ನಾಶ ಮಾಡುವುದೇ ಬಿಜೆಪಿಯ ಉದ್ದೇಶ ಎಂದವರು ಹೇಳಿದರು.

ರಾಷ್ಟ್ರೀಯ ವಿಚಾರವಾದಿ ಸಂಘಟನೆಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಮಾತನಾಡಿ, ದೇಶದಲ್ಲೆಡೆ ಮನುವಾದಿ ಸಂಸ್ಕೃತಿ ವ್ಯಾಪಿಸುತ್ತಿದ್ದು, ಜನಸಮುದಾಯವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ದಲಿತ ಸಮುದಾಯ ಈ ಬಗ್ಗೆ ಎಚ್ಚರಗೊಳ್ಳಬೇಕು ಎಂದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಅತ್ಯಾಚಾರ, ಕೊಲೆಯಂತಹ ಭೀಕರ ಘಟನೆಯೊಂದರ ಆರೋಪಿಗಳಿಗೆ ಸರಕಾರದವರೇ ಬೆಂಬಲ ನೀಡುವಂತಹ ಘಟನೆ ಹಿಂದೆಂದೂ ನಡೆದಿಲ್ಲ ಎಂದರು. ಘಟನೆಯಲ್ಲಿ ವಿದೇಶಿ ಕೈವಾಡ, ಕುಟುಂಬಕ್ಕೆ 50 ಲಕ್ಷ ರೂ. ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಅಧಿಕಾರ ನಡೆಸುತ್ತಿರುವ ಸರಕಾರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದವರು ಹೇಳಿದರು.

ಸಾಮಾಜಿಕ ಹೋರಾಟಗಾರ ಪಿ.ವಿ.ಮೋಹನ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ತಾಲಿಬಾನ್ ಸಂಸ್ಕೃತಿ ಮೆರೆಯುತ್ತಿದೆ. ಬಿಜೆಪಿ ದೇಶಕ್ಕೆ ದೊಡ್ಡ ಪಿಡುಗಾಗಿ ಪರಿಣಮಿಸುತ್ತಿದೆ ಎಂದು ಆರೋಪಿಸಿದರು.

ಧರಣಿಯಲ್ಲಿ ವಿವಿಧ ಪಕ್ಷಗಳು, ಸಂಘಟನೆಗಳ ಪ್ರಮುಖರಾದ ಕೆ.ವಿ. ಕುಕ್ಯಾನ್, ಸುನೀಲ್ ಕುಮಾರ್ ಬಜಾಲ್, ಸಂತೋಷ್ ಕುಮಾರ್, ಮುಹಮ್ಮದ್, ಸುಮತಿ ಹೆಗ್ಡೆ, ಸರೋಜಿನಿ ಬಂಟ್ವಾಳ, ರಘು ಎಕ್ಕಾರು ಮೊದಲಾದವರು ಭಾಗವಹಿಸಿದ್ದರು. ಕೃಷ್ಣನಾಂದ ಧರಣಿಯನ್ನು ನಿರ್ವಹಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News