ಮುಡಿಪು: ಹತ್ರಸ್ ಘಟನೆ ಖಂಡಿಸಿ ಡಿವೈಎಫ್‌ಐಯಿಂದ ಪ್ರತಿಭಟನೆ

Update: 2020-10-07 12:54 GMT

ಮುಡಿಪು : ಉತ್ತರಪ್ರದೇಶದ ಹತ್ರಸ್ ‌ನಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಕೊಲೆ ಮತ್ತು ನಂತರದ ಘಟನೆಯನ್ನು ಖಂಡಿಸಿ ಡಿವೈಎಫ್‌ಐ ಮುಡಿಪು, ಬಾಳೆಪುಣಿ, ಕೈರಂಗಳ ಘಟಕ ಸಮಿತಿಗಳ ಆಶ್ರಯದಲ್ಲಿ ಮುಡಿಪು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ದೇಶಾದ್ಯಂತ ಪ್ರತಿದಿನ ನೂರಾರು ಅತ್ಯಾಚಾರ ಘಟನೆಗಳು ವರದಿಯಾಗುತ್ತಿವೆ. ದೆಹಲಿಯ ನಿರ್ಭಯ ಪ್ರಕರಣದ ನಂತರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಬರಬೇಕು ಎಂದು ಒತ್ತಾಯಿಸಿ ಜನ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ಮೂಲಕ ಅತ್ಯಾಚಾರದ ವಿರುದ್ಧ ಜನಾಕ್ರೋಶ ದೇಶಾದ್ಯಂತ ಎದ್ದಿತು. ಆದರೆ ಅತ್ಯಾಚಾರ ಪ್ರಕರಣ ಕಡಿಮೆಯಾಗುವ ಬದಲು ಏರಿಕೆ ಕಂಡಿದ್ದಲ್ಲದೇ ಕೆಲ ಸಮಯದ ಬಳಿಕ ಕಾಶ್ಮೀರದ ಕಥುವಾದಲ್ಲಿ ಮಗುವಿನ ಮೇಲೆಯೂ ಅತ್ಯಾಚಾರ ನಡೆಯಿತು. ಆತಂಕಕಾರಿ ಬೆಳವಣಿಗೆ ಎಂದರೆ ಆ ಅತ್ಯಾಚಾರಿಗಳನ್ನು ಸಮರ್ಥಿಸಿ ತಿರಂಗಾ ಯಾತ್ರೆಯನ್ನು ಬಿಜೆಪಿ ನೇತಾರರು ನಡೆಸಿದ್ದು. ಈಗ ಈ ಪರಂಪರೆ ಹತ್ರಸ್ ‌ನಲ್ಲೂ ಮುಂದುವರಿಸಿದ್ದಾರೆ.  ಸುವರ್ಣ ಪರಿಷತ್ ಎಂಬ ಸಂಘಟನೆಯಡಿ ಈಗಾಗಲೇ ಆರೋಪಿಗಳನ್ನು ಬೆಂಬಲಿಸಿ ಸಭೆ ನಡೆಸಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಹೀಗಾಗಿ ಸರ್ಕಾರ ಅತ್ಯಾಚಾರಿಗಳ ಜೊತೆ ಅದನ್ನು ಸಮರ್ಥಿಸುವವರ ಮೇಲೂ ಕೇಸು ದಾಖಲಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಸಭೆಯನ್ನುದ್ದೇಶಿಸಿ ಡಿವೈಎಫ್‌ಐ ಜಿಲ್ಲಾ ನಾಯಕ ನಿತಿನ್ ಕುತ್ತಾರ್ , ರಝಾಕ್ ಮೊಂಟೆಪದವು ಮಾತನಾಡಿದರು. ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಚಂದ್ರಹಾಸ ಪಿಲಾರ್, ಇಬ್ರಾಹಿಂ ಮದಕ , ಡಿವೈಎಫ್‌ಐ ಜಿಲ್ಲಾ ನಾಯಕ ರಫೀಕ್ ಹರೇಕಳ , ಮಾಜಿ ಗ್ರಾಪಂ ಸದಸ್ಯ ಅಶ್ರಫ್ ಹರೇಕಳ , ಡಿವೈಎಫ್‌ಐ ಮುಡಿಪು ಘಟಕದ ಅಧ್ಯಕ್ಷ ರಝಾಕ್ ಮುಡಿಪು, ಆಖ್ತರ್ ಮುಡಿಪು, ಕೈರಂಗಳ ಘಟಕದ ಕಾರ್ಯದರ್ಶಿ ಖಲಂದರ್ ನಂದರಪಡ್ಪು, ಲತೀಫ್ ಪೊಯ್ಯತ್ತಬೈಲ್, ಶಾಫಿ ಮುಡಿಪು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News