ಹರ್ಯಾಣ: ಕೃಷಿ ಮಸೂದೆ ವಿರುದ್ಧ ಪ್ರತಿಭಟಿಸುತ್ತಿದ್ದ ಯೋಗೇಂದ್ರ ಯಾದವ್ ಬಂಧನ

Update: 2020-10-07 14:12 GMT

ಚಂಡೀಗಢ, ಅ.7: ಕೃಷಿ ಮಸೂದೆಯನ್ನು ವಿರೋಧಿಸಿ ಹರ್ಯಾಣದ ಸಿರ್ಸದಲ್ಲಿ ಬುಧವಾರ ರೈತರು ನಡೆಸಿದ ಪ್ರತಿಭಟನೆಯನ್ನು ಪೊಲೀಸರು ತೆರವುಗೊಳಿಸಿದ್ದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಹಾಗೂ ಸುಮಾರು 100 ರೈತರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ದಸರಾ ಮೈದಾನದಲ್ಲಿ ಅಥವಾ ಜಿಲ್ಲಾಧಿಕಾರಿ ಕಚೇರಿ ಬಳಿ ರೈತರಿಗೆ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ಆದರೆ ಯೋಗೇಂದ್ರ ಯಾದವ್, ಹರ್ಯಾಣ ಕಿಸಾನ್ ಮಂಚ್ ಮುಖ್ಯಸ್ಥ ಪ್ರಹ್ಲಾದ್ ಸಿಂಗ್ ಹಾಗೂ ರೈತರು ಸಿರ್ಸ ಹೆದ್ದಾರಿಯಲ್ಲಿ ಧರಣಿ ಕುಳಿತು ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಸಿರ್ಸ ಡಿಎಸ್ಪಿ ಕುಲ್‌ದೀಪ್ ಸಿಂಗ್ ಹೇಳಿದ್ದಾರೆ.

ಸಿರ್ಸದಲ್ಲಿ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಜೊತೆ ಸೇರಿದ್ದಕ್ಕೆ ತನ್ನನ್ನು ಹಾಗೂ 100ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿರುವುದಾಗಿ ಯಾದವ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರೈತರ ಪ್ರಶ್ನೆಗಳಿಗೆ ಉತ್ತರಿಸಲಾಗದ ಹರ್ಯಾಣ ಸರಕಾರ ಬಲಪ್ರಯೋಗದ ಮೂಲಕ ಭಿನ್ನಾಭಿಪ್ರಾಯ ಹತ್ತಿಕ್ಕಲು ಪ್ರಯತ್ನಿಸಿದೆ. ಆದರೆ ರೈತರ ಪ್ರತಿಭಟನೆ ಬೃಹತ್ ರೂಪಕ್ಕೆ ತಿರುಗಲಿದೆ ಎಂದವರು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಮಂಗಳವಾರ ಹರ್ಯಾಣದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ 17 ಪ್ರತ್ಯೇಕ ರೈತ ಸಂಘಟನೆಗಳು ಭಾಗವಹಿಸಿದ್ದರೆ ಬುಧವಾರದ ಪ್ರತಿಭಟನೆಯಲ್ಲಿ ಕೆಲವೇ ರೈತ ಸಂಘಟನೆಗಳು ಕೈಜೋಡಿಸಿದ್ದವು ಎಂದು ವರದಿ ತಿಳಿಸಿದೆ.

ರೈತರ ಉದ್ಧಾರಕ, ಹರ್ಯಾಣದ ಮಹಾನ್ ಮುಖಂಡ ದಿವಂಗತ ದೇವೀಲಾಲ್ ರೈತರ ಹಿತಾಸಕ್ತಿಗಾಗಿ ಹೋರಾಡಿದ್ದವರು. ಅವರ ಹೆಸರು ಹೇಳಿಕೊಂಡು ಅಧಿಕಾರ ಪಡೆದಿರುವ ರಂಜೀತ್ ಚೌಟಾಲ ಮತ್ತು ದುಷ್ಯಂತ್ ಚೌಟಾಲಾ ರೈತರನ್ನು ಮರೆತಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಹರ್ಯಾಣ ಘಟಕಾಧ್ಯಕ್ಷ ಗುರ್ನಾಮ್ ಸಿಂಗ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News