ಅಲ್ಪಸಂಖ್ಯಾತರ ಗುರಿಯಾಗಿಸುವುದರ ವಿರುದ್ಧ ಭಾರತಕ್ಕೆ ಐರೋಪ್ಯ ಸಂಸತ್ತಿನ ಸಮಿತಿಯ ಎಚ್ಚರಿಕೆ

Update: 2020-10-07 14:55 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಅ.7: ದೇಶದಲ್ಲಿ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳುವುದರ ವಿರುದ್ಧ ಐರೋಪ್ಯ ಸಂಸತ್ತಿನ ಮಾನವ ಹಕ್ಕುಗಳ ಕುರಿತ ಉಪಸಮಿತಿಯು ಭಾರತಕ್ಕೆ ಎಚ್ಚರಿಕೆ ನೀಡಿದೆ. ಮಾನವ ಹಕ್ಕುಗಳ ಉತ್ತೇಜನ ಮತ್ತು ರಕ್ಷಣೆಯ ತನ್ನ ಭರವಸೆಯನ್ನು ಈಡೇರಿಸುವಂತೆ ಅದು ನರೇಂದ್ರ ಮೋದಿ ಸರಕಾರವನ್ನು ಆಗ್ರಹಿಸಿದೆ.

ಸಿಎಎ ವಿರುದ್ಧ ಪ್ರತಿಭಟನೆಗಳು ನಿರಂಕುಶ ಬಂಧನಗಳು ಮತ್ತು ಅನಗತ್ಯ ಪ್ರಾಣಹಾನಿಗಳಿಗೆ ಕಾರಣವಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಉಪಸಮಿತಿಯ ಅಧ್ಯಕ್ಷೆ ಮಾರಿಯಾ ಅರೆನಾ ಅವರು, ಪತ್ರಕರ್ತರು ಮತ್ತು ಶಾಂತಿಯುತ ಟೀಕಾಕಾರರನ್ನು ಕರಾಳ ಭಯೋತ್ಪಾದನೆ ನಿಗ್ರಹ ಮತ್ತು ದೇಶದ್ರೋಹ ಕಾನೂನುಗಳಡಿ ಬಂಧಿಸಲಾಗುತ್ತಿದೆ. ಅಧಿಕಾರಿಗಳು ಮಾನವ ಹಕ್ಕು ಹೋರಾಟಗಾರರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದಿದ್ದಾರೆ.

ಉಪೇಕ್ಷಿತ ಸಮುದಾಯಗಳು, ಧಾರ್ಮಿಕ ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮರು,ಸರಕಾರದ ವಿರುದ್ಧ ಧ್ವನಿಯೆತ್ತುವ ನಾಗರಿಕರು ಮತ್ತು ಸರಕಾರದ ನೀತಿಗಳ ಟೀಕಾಕಾರರು ತುಂಬಾ ಸಮಯದಿಂದ ಹೆಚ್ಚಿನ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದ್ದಾರೆ.

ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ವರದಿಯನ್ನು ಉಲ್ಲೇಖಿಸಿರುವ ಅರೆನಾ,ದಿಲ್ಲಿಯಲ್ಲಿ 2020ರ ಫೆಬ್ರವರಿಯಲ್ಲಿ ಸಂಭವಿಸಿದ್ದ ಕೋಮುದಂಗೆಗಳ ಸಂದರ್ಭದಲ್ಲಿ ಪೊಲೀಸರು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಈ ಉಲ್ಲಂಘನೆಗಳ ಕುರಿತು ಸ್ವತಂತ್ರ ಮತ್ತು ನಿಷ್ಪಕ್ಷ ತನಿಖೆ ನಡೆಯಬೇಕು. ಹಿಂಸಾಚಾರವನ್ನು ತಡೆಯುವಲ್ಲಿ ವೈಫಲ್ಯ ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ್ದರಲ್ಲಿ ಪೊಲೀಸರ ಪಾತ್ರದ ಕುರಿತು ಸಂಪೂರ್ಣ ಸ್ವತಂತ್ರವಾದ,ಬಹಿರಂಗ ಮತ್ತು ಪಾರದರ್ಶಕ ವಿಚಾರಣೆಯೂ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ದೇಶದಲ್ಲಿ ತನ್ನ ಕಾರ್ಯಗಳನ್ನು ನಿಲ್ಲಿಸುವಂತೆ ಮಾನವ ಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್‌ನ್ನು ಒತ್ತಡಕ್ಕೆ ಸಿಲುಕಿಸಲಾಗಿದೆ ಎಂಬ ಕಳವಳವನ್ನೂ ಅರೆನಾ ಹೇಳಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ. ಹಕ್ಕುಗಳ ಶೋಷಣೆ ಕುರಿತು ಧ್ವನಿಯೆತ್ತಿದ್ದಕ್ಕಾಗಿ ಶಿಕ್ಷೆಯಾಗಿ ಕೇಂದ್ರವು ತನ್ನ ಎಲ್ಲ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಆ್ಯಮ್ನೆಸ್ಟಿ ಸೆ.29ರಂದು ಆರೋಪಿಸಿತ್ತು.

ಸರಕಾರದ ಕ್ರಮವನ್ನು ವಿವಿಧ ಸಂಘಟನೆಗಳು ಖಂಡಿಸಿವೆ. ಆ್ಯಮ್ನೆಸ್ಟಿ ಕುರಿತು ಸರಕಾರದ ತನಿಖೆಯ ಬಗ್ಗೆ ಅಮೆರಿಕ,ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ಸಹ ಕಳವಳಗಳನ್ನು ವ್ಯಕ್ತಪಡಿಸಿವೆ. ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಭಾರತವು,ಯಾವುದೇ ಸಂಸ್ಥೆಯಿಂದ ಭಾರತೀಯ ಕಾನೂನುಗಳ ಉಲ್ಲಂಘನೆಯನ್ನು ಇತರ ರಾಷ್ಟ್ರಗಳು ಕ್ಷಮಿಸಬಾರದು ಎಂದು ಹೇಳಿದೆ.

 ಸೆ.23ರಂದು ಜಾಗತಿಕ ಸಂಸ್ಥೆ ಪ್ರೊಗ್ರೆಸಿವ್ ಇಂಟರ್‌ನ್ಯಾಷನಲ್ ದಶಕಗಳ ತಮ್ಮ ಸಾಮಾಜಿಕ,ರಾಜಕೀಯ ಮತ್ತು ಪ್ರಜಾಸತ್ತಾತ್ಮಕ ಕಾರ್ಯಗಳಿಂದ ಹೆಸರಾಗಿರುವ ಟೀಕಾಕಾರರು ಮತ್ತು ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಳ್ಳುತ್ತಿರುವುದಕ್ಕಾಗಿ ಮತ್ತು ದಿಲ್ಲಿ ಹಿಂಸಾಚಾರ ಮತ್ತು ಭೀಮಾ-ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಭಯೋತ್ಪಾದನೆ ವಿರೋಧಿ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಗಳಡಿ ಆರೋಪಗಳನ್ನು ಹೊರಿಸುತ್ತಿರುವುದಕ್ಕಾಗಿ ಸರಕಾರವನ್ನು ಖಂಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News