ದಿಲ್ಲಿ ಗಲಭೆ: ಮಸೀದಿ ಧ್ವಂಸಕ್ಕೆ ವಾಟ್ಸ್ಆ್ಯಪ್ ಗುಂಪಿನ ಯೋಜನೆ; ಪೂರಕ ಆರೋಪ ಪಟ್ಟಿಯಲ್ಲಿ ಉಲ್ಲೇಖ

Update: 2020-10-07 14:22 GMT

ಹೊಸದಿಲ್ಲಿ, ಅ.7: ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರದ ಸಂದರ್ಭ ಆರಂಭಿಸಲಾಗಿದ್ದ ‘ಕಟ್ಟರ್ ಹಿಂದು ಏಕತ’ ಎಂಬ ವಾಟ್ಸ್ಆ್ಯಪ್ ತಂಡವೊಂದು ಧರ್ಮದ ಆಧಾರದಲ್ಲಿ ವಿವಿಧ ಪಂಗಡಗಳ ಮಧ್ಯೆ ದ್ವೇಷಕ್ಕೆ ಉತ್ತೇಜನ ನೀಡಿತ್ತಲ್ಲದೆ ಸಾಮರಸ್ಯಕ್ಕೆ ಭಂಗ ತರುವ ಪರಿಸ್ಥಿತಿ ಮೂಡಲು ಕಾರಣವಾಗಿದೆ ಎಂದು ದಿಲ್ಲಿ ಪೊಲೀಸರು ನ್ಯಾಯಾಲಯದ ಎದುರು ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ವಾಟ್ಸ್ಆ್ಯಪ್ ತಂಡದವರು ಮಸೀದಿ, ಮದರಸವನ್ನು ಧ್ವಂಸಗೊಳಿಸುವ, ಮುಸ್ಲಿಮರನ್ನು ಹತ್ಯೆ ಮಾಡುವ ಕುರಿತು ಮತ್ತು ಕೋಮು ನಿಂದನೆ ನಡೆಸಿರುವ ಸಂಭಾಷಣೆಯ ದಾಖಲೆಯನ್ನು ಆರೋಪಪಟ್ಟಿಯ ಜೊತೆ ಲಗತ್ತಿಸಲಾಗಿದೆ. ಮುಸ್ಲಿಂ ಸಮುದಾಯದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ವಾಟ್ಸ್ಆ್ಯಪ್ ತಂಡವನ್ನು ಫೆಬ್ರವರಿ 25ರಂದು ರಚಿಸಲಾಗಿದೆ. ಆರೆಸ್ಸೆಸ್ ಮುಖಂಡರು ತಮ್ಮ ಬೆಂಬಲಕ್ಕೆ ಇದ್ದಾರೆ ಎಂದು ಸಂಭಾಷಣೆಯಲ್ಲಿ ಉಲ್ಲೇಖಿಸಲಾಗಿದೆ. ಹಿಂಸಾಚಾರದ ಸಂದರ್ಭ ಗೋಕುಲ್‌ಪುರಿಯಲ್ಲಿ ನಡೆದ ಹಾಶಿಂ ಆಲಿಯ ಹತ್ಯೆ ಪ್ರಕರಣದಲ್ಲಿ 9 ಆರೋಪಿಗಳ ವಿರುದ್ಧ ಸೆಪ್ಟಂಬರ್ 26ರಂದು ಪೂರಕ ಆರೋಪಪಟ್ಟಿ ದಾಖಲಿಸಲಾಗಿದೆ.

ವಾಟ್ಸ್ಆ್ಯಪ್ ತಂಡಗಳ ನಡುವಿನ ಸಂಭಾಷಣೆಯಂತೆ, ಹಿಂದುಗಳ ಮೇಲೆ ದಾಳಿ ನಡೆಸಿರುವುದಕ್ಕೆ ಮುಸ್ಲಿಮರಿಗೆ ಪಾಠ ಕಲಿಸಲು ಆರೋಪಿಗಳು ಸಂಚು ಹೂಡಿದ್ದರು. ಅದರಂತೆ ಲಾಠಿ, ದೊಣ್ಣೆ, ಖಡ್ಗ, ಬಂದೂಕುಗಳ ಸಹಿತ ಶಸ್ತ್ರಸಜ್ಜಿತರಾಗಿ ಹಾಶಿಂ ಆಲಿ, ಆತನ ಸಹೋದರ ಆಮಿರ್ ಖಾನ್ ಸಹಿತ 9 ಅಮಾಯಕ ಮುಸ್ಲಿಮರನ್ನು ಹತ್ಯೆ ಮಾಡಿದ್ದಾರೆ. ಇದೊಂದು ಪೂರ್ವನಿರ್ಧರಿತ ಷಡ್ಯಂತ್ರವಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ವಾಟ್ಸ್ಆ್ಯಪ್ ತಂಡ ರಚಿಸಿಕೊಂಡ ಬಳಿಕ ಸದಸ್ಯರು ತಮ್ಮ ವೈಯಕ್ತಿಕತೆ ಕಳೆದುಕೊಂಡರು ಮತ್ತು ಸಮೂಹ ಸನ್ನಿಗೆ ಒಳಗಾದರು. ಸಂಭಾಷಣೆ ಸಂದರ್ಭ ಜೈಶ್ರೀರಾಂ ಮತ್ತು ಹರ ಹರ ಮಹಾದೇವ್ ಎಂಬ ಒಕ್ಕಣೆಯನ್ನು ಸೇರಿಸುತ್ತಿದ್ದರು. ಸೃಜನಶೀಲ ಸ್ವಭಾವವನ್ನು ಮರೆತು ದೊಂಬಿ, ಕೊಲೆ ಮುಂತಾದ ಅಪರಾಧ ಕೃತ್ಯ ನಡೆಸುವ ಯೋಜನೆ ರೂಪಿಸಿದರು. ಗುಂಪಿನ ನಡುವಿನ ಕೆಲ ಸಂಭಾಷಣೆಯಲ್ಲಿ ‘ಅವರಿಗೆ ಬಾಡಿಗೆಗೆ ಮನೆ ನೀಡಬೇಡಿ’, ನಮ್ಮ ಪುತ್ರಿಯರು, ಸಹೋದರಿಯರು, ಭೂಮಿಯ ಮೇಲೆ ಅವರು ಕಣ್ಣು ಹಾಕಿದ್ದಾರೆ’, ಇವತ್ತು ಮದರಸವನ್ನು ಸುಟ್ಟು ಹಾಕಿದಂತೆ ಅವರನ್ನೂ ಸುಟ್ಟು ಹಾಕುತ್ತೇವೆ’, ಅವರನ್ನು ಬಿಡಬೇಡಿ, ಕೊಂದು ಹಾಕಿ’ ಎಂದು ಪರಸ್ಪರ ಸಂವಹನ ನಡೆಸಿರುವುದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಕಲ್ಲು, ಇಟ್ಟಿಗೆ, ಪಿಸ್ತೂಲ್‌ಗಳನ್ನು ಸಿದ್ಧಮಾಡಿಟ್ಟುಕೊಳ್ಳುವ ಹಾಗೂ ದೊಂಬಿಯ ಸಂದರ್ಭ ಮದರಸವನ್ನು ಧ್ವಂಸ ಮಾಡುವ ಬಗ್ಗೆಯೂ ಸಂಭಾಷಣೆ ನಡೆದಿದೆ.

ಆರೋಪಿಗಳಾದ ಲೋಕೇಶ್ ಕುಮಾರ್ ಸೋಲಂಕಿ, ಪಂಕಜ್ ಶರ್ಮ, ಸುಮಿತ್ ಚೌಧರಿ, ಅಂಕಿತ್ ಚೌಧರಿ, ಪ್ರಿನ್ಸ್, ಜತಿನ್ ಶರ್ಮ, ವಿವೇಕ್ ಪಾಂಚಾಲ್, ರಿಷಬ್ ಚೌಧರಿ, ಹಿಮಾಂಶು ಠಾಕೂರ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಹ ಆರೋಪಿಗಳಾದ ಮಾಂಟಿ ನಗರ್, ಅವದೇಶ್ ಮಿಶ್ರಾ, ಮೋನು, ಸಾಹಿಲ್, ಶೇಖರ್, ಮೋಂಗ್ಲಿ, ಬಾಬಾ, ಟಿಂಕು ಮತ್ತು ವಿನಯ್ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News