ಶಶಿಕಲಾಗೆ ಸೇರಿರುವ 2 ಸಾವಿರ ಕೋಟಿ ರೂ. ಆಸ್ತಿ ವಶಪಡಿಸಿಕೊಂಡ ಐಟಿ ಇಲಾಖೆ

Update: 2020-10-07 17:14 GMT

ಚೆನ್ನೈ: ಜೈಲಿನಿಂದ ಬಿಡುಗಡೆಯಾಗಲು ಮೂರು ತಿಂಗಳು ಬಾಕಿ ಇರುವಾಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಗೆ ಸೇರಿರುವ 2000 ಕೋ.ರೂ. ಮೌಲ್ಯದ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

69ರ ವಯುಸ್ಸಿನ ಶಶಿಕಲಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 2017ರಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ದಿವಂಗತ ಜೆ.ಜಯಲಲಿತಾ ಪ್ರಮುಖ ಆರೋಪಿಯಾಗಿದ್ದರು. ಶಶಿಕಲಾ ಜನವರಿ ಅಂತ್ಯಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

ತಮಿಳುನಾಡಿನಲ್ಲಿ 2021ರ ಮೇನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಶಶಿಕಲಾ ಜೈಲಿನಿಂದ ಹೊರ ಬರುವ ನಿರೀಕ್ಷೆಯಿದೆ.

2017ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಅನುಸಾರ ಐಟಿ ಇಲಾಖೆ ಈ ಕ್ರಮ ಕೈಗೊಂಡಿದೆ. ಇಷ್ಟೊಂದು ತಡವಾಗಿ ಏಕೆ ಕ್ರಮಕೈಗೊಳ್ಳಲಾಗಿದೆ ಎನ್ನುವುದು ಗೊತ್ತಾಗಿಲ್ಲ. ವಶಪಡಿಸಿಕೊಂಡಿರುವ ಆಸ್ತಿಗಳು ಕೊಡನಾಡ್ ಹಾಗೂ ಸಿರುಥವೂರ್ ಪ್ರದೇಶದಲ್ಲಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಆಡಳಿತರೂಢ ಎಐಎಡಿಎಂಕೆ ಪಕ್ಷ ಮುಂದಿನ ಚುನಾವಣೆಗೆ ಇ.ಪಳನಿಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಘೋಷಿಸಿದ ದಿನವೇ ಐಟಿ ಇಲಾಖೆ ಈಕ್ರಮ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News