ಕೋವಿಡ್ ಸಾಂಕ್ರಾಮಿಕದಲ್ಲಿಯೂ ಇನ್ನಷ್ಟು ಸಂಪತ್ತು ಕೂಡಿ ಹಾಕಿದ ಭಾರತದ ಅತ್ಯಂತ ಶ್ರೀಮಂತರು
ಹೊಸದಿಲ್ಲಿ,ಅ.8: ಕೋವಿಡ್ ಲಾಕ್‌ಡೌನ್ ಮತ್ತು ಆ ಅವಧಿಯಲ್ಲಿ ಭಾರತೀಯ ಶೇರು ಮಾರುಕಟ್ಟೆಗಳು ಕುಸಿತವನ್ನು ದಾಖಲಿಸುತ್ತಿದ್ದರೂ ಭಾರತದ ನೂರು ಅತ್ಯಂತ ಶ್ರೀಮಂತರು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಅದು ಅಡ್ಡಿಯಾಗಿಲ್ಲ. ಈ ಶ್ರೀಮಂತರ ಒಟ್ಟು ಸಂಪತ್ತು ಶೇ.14ರಷ್ಟು ಏರಿಕೆಯಾಗಿದೆ. ಫೋರ್ಬ್ಸ್ ಇಂಡಿಯಾ ಸಿದ್ಧಗೊಳಿಸಿರುವ 2020ನೇ ಸಾಲಿನ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಸತತ 13ನೇ ವರ್ಷವೂ ಅಗ್ರಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಸಂಪತ್ತು 37.3 ಶತಕೋಟಿ ಡಾ.ಗಳ ಏರಿಕೆಯನ್ನು ಕಂಡಿದೆ.
ಫೋರ್ಬ್ಸ್ ಪಟ್ಟಿಯಲ್ಲಿರುವ ಭಾರತದ ನೂರು ಅತ್ಯಂತ ಶ್ರೀಮಂತರ ಪೈಕಿ ಶೇ.50ರಷ್ಟು ಜನರ ಸಂಪತ್ತು ಏರಿಕೆಯಾಗಿದ್ದು,ಈ ಒಟ್ಟು ಏರಿಕೆ ಪ್ರಮಾಣದಲ್ಲಿ ಅಂಬಾನಿ ಅವರ ಪಾಲು ಶೇ.50ಕ್ಕೂ ಹೆಚ್ಚಿದೆ.
ಅಂಬಾನಿಯವರ ನಿವ್ವಳ ಮೌಲ್ಯ ಶೇ.73ರಷ್ಟು ಏರಿಕೆಯಾಗಿದ್ದು,ಅದೀಗ 88.7 ಶತಕೋಟಿ ಡಾ.ಅಥವಾ 6.52 ಲಕ್ಷ ಕೋಟಿ ರೂ.ಗಳನ್ನು ತಲುಪಿದೆ. ಲಾಕ್‌ಡೌನ್ ಅವಧಿಯಲ್ಲಿ ಅಂಬಾನಿ ಫೇಸ್‌ಬುಕ್ ಮತ್ತು ಗೂಗಲ್‌ನಂತಹ ಉನ್ನತ ಹೂಡಿಕೆದಾರರಿಂದ ತನ್ನ ಜಿಯೊ ಪ್ಲಾಟ್‌ಫಾರ್ಮ್‌ಗಳಿಗಾಗಿ 20 ಶತಕೋಟಿ ಡಾ.ಗೂ.ಅಧಿಕ ಹಣವನ್ನು ಸಂಗ್ರಹಿಸಿದ ಬಳಿಕ ಅವರ ರಿಲಯನ್ಸ್ ಇಂಡಸ್ಟ್ರೀಸ್ ಶೇರಿನ ಬೆಲೆಗಳು ಭಾರೀ ಜಿಗಿತವನ್ನು ಕಂಡಿದ್ದವು. ಈ ವರ್ಷ ಮುಂಬೈ ವಿಮಾನ ನಿಲ್ದಾಣದ ಶೇ.74ರಷ್ಟು ಪಾಲನ್ನು ಖರೀದಿಸಿರುವ ಮೂಲಸೌಕರ್ಯ ಕ್ಷೇತ್ರದ ಪ್ರಮುಖ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಅಂಬಾನಿ ನಂತರದ ಸ್ಥಾನದಲ್ಲಿದ್ದಾರೆ. ಪೋರ್ಟ್ಸ್ ಆ್ಯಂಡ್ ಸೆಝ್‌ನ ಮುಖ್ಯಸ್ಥರೂ ಆಗಿರುವ ಅದಾನಿ ಅವರ ನಿವ್ವಳ ಮೌಲ್ಯ 25.2 ಶತಕೋಟಿ ಡಾ.ಗಳಾಗಿವೆ.
ಈ ವರ್ಷದ ಜುಲೈವರೆಗೂ ಪ್ರಮುಖ ಐಟಿ ಕಂಪನಿ ಎಚ್‌ಸಿಎಲ್ ಟೆಕ್ನಾಲಜೀಸ್‌ನ್ನು ಮುನ್ನಡೆಸಿದ್ದ ಶಿವ ನಾಡಾರ್ ಕಳೆದ ವರ್ಷಕ್ಕಿಂತ ಮೂರು ಸ್ಥಾನ ಮೇಲಕ್ಕೇರಿದ್ದು,20.4 ಶತಕೋಟಿ ಡಾ.ಗಳ ನಿವ್ವಳ ಮೌಲ್ಯದೊಡನೆ ಫೋರ್ಬ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಸೈರಸ್ ಪೂನಾವಾಲಾ ಅವರ ನಿವ್ವಳ ಸಂಪತ್ತು ಶೇ.26ರಷ್ಟು ಏರಿಕೆಯಾಗಿ 11.5 ಶತಕೋಟಿ ಡಾ.ಗಳಿಗೆ ತಲುಪಿದೆ. ಅವರ ಒಡೆತನದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಡ್-19 ವ್ಯಾಕ್ಸೀನ್ ಅಭಿವೃದ್ಧಿಗಾಗಿ ಪೈಪೋಟಿಯಲ್ಲಿದೆ.
ಬಯೊಕಾನ್ ಸ್ಥಾಪಕಿ ಕಿರಣ್ ಮಝುಮ್ದಾರ್ ಶಾ ಅವರ ನಿವ್ವಳ ಸಂಪತ್ತು ಹೆಚ್ಚುಕಡಿಮೆ ಇಮ್ಮಡಿಗೊಂಡು 4.6 ಶತಕೋಟಿ ಡಾ.ಗಳಷ್ಟಾಗಿದೆ. ಅವರು ಫೋರ್ಬ್ಸ್ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿದ್ದಾರೆ.
ಇನ್ಫೋ ಎಡ್ಜ್ (ಇಂಡಿಯಾ)ದ ಸಹಸ್ಥಾಪಕ ಸಂಜೀವ ಭಿಖಚಂದಾನಿ, ಶೇರು ಬ್ರೋಕಿಂಗ್ ಸಂಸ್ಥೆ ಝೆರೋಧಾದ ಸಹಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಸೋದರರು, ವಿನತಿ ಆರ್ಗಾನಿಕ್ಸ್‌ನ ಸ್ಥಾಪಕ ವಿನೋದ ಸರಾಫ್,ಎಸ್‌ಆರ್‌ಎಫ್‌ನ ಅರುಣ ಭರತ ರಾಮ ಹಾಗೂ ಆರತಿ ಇಂಡಸ್ಟ್ರೀಸ್‌ನ ಚಂದ್ರಕಾಂತ್ ಮತ್ತು ರಾಜೇಂದ್ರ ಗೋಗ್ರಿ ಸೋದರರು ಸೇರಿದಂತೆ ದೇಶದ ಒಂಭತ್ತು ಶ್ರೀಮಂತರು ಫೋರ್ಬ್ಸ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಪಟ್ಟಿಯಲ್ಲಿರುವ ಶ್ರೀಮಂತರ ಪೈಕಿ ಶೇ.33ಕ್ಕೂ ಅಧಿಕ ಜನರ,ವಿಶೇಷವಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಪತ್ತಿನಲ್ಲಿ ಇಳಿಕೆಯಾಗಿದೆ.
ಫ್ಯೂಚರ್ ಗ್ರೂಪ್‌ನ ಸ್ಥಾಪಕ ಕಿಶೋರ ಬಿಯಾನಿ ಸೇರಿದಂತೆ ಸುಮಾರು ಒಂದು ಡಝನ್ ಶ್ರೀಮಂತರು ಫೋರ್ಬ್ಸ್ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಬಿಯಾನಿ ತನ್ನ ರಿಟೇಲ್ ಉದ್ಯಮದ ಹೆಚ್ಚಿನ ಪಾಲನ್ನು ಕಳೆದ ಆಗಸ್ಟ್‌ನಲ್ಲಿ ರಿಲಯನ್ಸ್‌ಗೆ ಮಾರಾಟ ಮಾಡಿದ್ದರು.
ಕಿರಣ್ ಮಝುಮ್ದಾರ್ ಶಾ ಅವರು ಸುದ್ದಿ ಜಾಲತಾಣ ‘ದಿ ಪ್ರಿಂಟ್’ನ ಸ್ಥಾಪಕ ಹೂಡಿಕೆದಾರರಲ್ಲೊಬ್ಬರಾಗಿದ್ದಾರೆ.