ಉ.ಪ್ರ. ಸಿಎಂ ವಿರುದ್ಧದ ಮಿಥುನ್ ರೈ ಹೇಳಿಕೆ ಖಂಡನೀಯ: ಬಿಜೆಪಿ

Update: 2020-10-10 10:16 GMT

ಮಂಗಳೂರು, ಅ.10: ಉತ್ತರ ಪ್ರದೇಶದ ಘಟನೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ವೇಳೆ ಮಿಥುನ್ ರೈ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಬಗ್ಗೆ ತುಚ್ಛವಾದ ಹೇಳಿಕೆ ನೀಡಿದ್ದಾರೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ಇದನ್ನು ಖಂಡಿಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಹೇಳಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ನಡೆಸುವುದು ಸಂವಿಧಾನದ ಹಕ್ಕು. ಆದರೆ ಸಂವಿಧಾನದ ಆಶಯದಂತೆ ಪ್ರಧಾನಿ, ಮುಖ್ಯಮಂತ್ರಿ ಬಗ್ಗೆ ತುಚ್ಛವಾಗಿ ಮಾತನಾಡುವಂತಿಲ್ಲ ಎಂದರು.

ಮಿಥುನ್ ರೈ ಪ್ರತಿಭಟನೆಯ ವೇಳೆ ಆದಿತ್ಯನಾಥ ಜಿಲ್ಲೆಗೆ ಆಗಮಿಸಿದರೆ ಕಪ್ಪು ಮಸಿ ಬಳಿಯುವುದಾಗಿ ಹೇಳುವ ಮೂಲಕ ನಾಥ ಪರಂಪರೆಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದ ಅವರು, ದ.ಕ. ಜಿಲ್ಲೆಯನ್ನು ನೀವೇನಾದರೂ ಖರೀದಿಸಿದ್ದೀರಾ ಎಂದು ಮಿಥುನ್ ರೈಯನ್ನು ಪ್ರಶ್ನಿಸಿದರು.

ದ.ಕ. ಜಿಲ್ಲೆಗೆ ನಾಥ ಪರಂಪರೆಯ ಕೊಡುಗೆ ಸಾಕಷ್ಟಿದೆ. ನಾಥ ಪರಂಪರೆಯ ಮಠ ಇರುವುದು ಕದ್ರಿಯಲ್ಲಿ. ಇಲ್ಲಿ ಪೀಠಾಧಿಪತಿಯ ಪಟ್ಟಾಭಿಷೇಕಕ್ಕೆ ಆದಿತ್ಯನಾಥರ ಉಪಸ್ಥಿತಿ ಬೇಕು. ಅದನ್ನು ಮಿಥುನ್ ರೈ ಮರೆತು ಮಾತನಾಡಿದ್ದಾರೆ. ಈ ರೀತಿಯ ಹೇಳಿಕೆಯಿಂದ ಅವರ ಯೋಗ್ಯತೆಯ ಜತೆಗೆ ಕಾಂಗ್ರೆಸ್‌ನ ನಿಜಬಣ್ಣ ಬಯಲಾಗುತ್ತಿದೆ ಎಂದು ಹೇಳಿದರು.

ಅತ್ಯಾಚಾರ ಪ್ರಕರಣ ಅಥವಾ ಅತ್ಯಾಚಾರಿಗಳನ್ನು ರಕ್ಷಣೆ ಮಾಡುವ ಕೆಲಸ ಬಿಜೆಪಿ ಎಂದೂ ಮಾಡುವುದಿಲ್ಲ. ಆದರೆ ಈ ರೀತಿ ಮುಂದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಬಿಜೆಪಿ ಸೂಕ್ತ ಉತ್ತರ ನೀಡಲಿದೆ ಎಂದು ಸುದರ್ಶನ್ ಹೇಳಿದರು. ಅತ್ಯಾಚಾರಕ್ಕೆ ಸಂಬಂಧಿಸಿ ಕಠಿಣ ಕಾನೂನು ಜಾರಿಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ. ಉತ್ತರ ಪ್ರದೇಶದ ಘಟನೆ ಬಗ್ಗೆ ಪ್ರತಿಭಟಿಸುತ್ತಿರುವ ಕಾಂಗ್ರೆಸ್‌ನವರು ಕೇರಳದಲ್ಲಿ ಕೋವಿಡ್ ಪೀಡಿತ ಮಹಿಳೆ ಮೇಲೆ ಅತ್ಯಾಚಾರವಾದಾಗ, ಬಾಳೆಪುಣಿ ಪ್ರಕರಣಕ್ಕೆ ಸಂಬಂಧಿಸಿ ಯಾಕೆ ಪ್ರತಿಭಟಿಸಿಲ್ಲ? ಆದಿತ್ಯನಾಥರನ್ನೇ ಗುರಿಯಾಗಿಸಿ ಪ್ರತಿಭಟನೆ ನಡೆಸುತ್ತಿರುವುದು ಗಲಭೆ ಸೃಷ್ಟಿಸುವ ಉದ್ದೇಶದಿಂದ ಎಂದು ಸುದರ್ಶನ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಹಿರಿಯ ಸದಸ್ಯ ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News