ಕ್ಯಾನ್ಸರ್ ರೋಗಿಗಳಿಗೆ ಗಿಡಮೂಲಿಕೆ ಸಸ್ಯಗಳ ವಿತರಣೆ

Update: 2020-10-10 13:33 GMT

ಮಣಿಪಾಲ, ಅ.10: ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನಾಚರಣೆ ಅಂಗವಾಗಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ವತಿಯಿಂದ ದೀರ್ಘಕಾಲದ ರೋಗದಿಂದ ಮಡಿದ ತಮ್ಮ ಪ್ರೀತಿಪಾತ್ರರ ನೆನಪಿಗಾಗಿ ಅವರ ಸಂಬಂಧಿಕರಿಂದ ಗಿಡ ನೆಡುವ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.

ಮಣಿಪಾಲದ ಎಂಡ್-ಪಾಯಿಂಟ್ ಗೇಟ್ ಬಳಿ ಇರುವ ಮಕ್ಕಳ ಉದ್ಯಾನವನದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅನಂತರ ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಯ ಮುಂಭಾಗದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಗಿಡಮೂಲಿಕೆ ಸಸ್ಯಗಳನ್ನು ವಿತರಿಸಲಾಯಿತು.

ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೇ ಶನಿವಾರವನ್ನು ವಿಶ್ವ ಆರೈಕೆ ಮತ್ತು ಪ್ರಶಾಮಕ ಚಿಕಿತ್ಸಾ ದಿನವನ್ನಾಗಿ ಆಚರಿಸಲಾಗುತ್ತದೆ. ಆ ಮೂಲಕ ಪ್ರಶಾಮಕ ಆರೈಕೆಯ ಕುರಿತು ಅರಿವು ಮೂಡಿಸುವ ಮತ್ತು ಅದನ್ನು ವಿಶ್ವದ ಎಲ್ಲೆಡೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಎಂಸಿಯ ಡೀನ್ ಡಾ. ಶರತ್ ಕುಮಾರ್ ರಾವ್ ಮಾತನಾಡಿ, ಜಗತ್ತಿನಲ್ಲಿ 32.5 ಮಿಲಿಯ ಜನರಿಗೆ ಪ್ರಶಾಮಕ ಆರೈಕೆಯ ಅಗತ್ಯವಿದೆ. ದುರದೃಷ್ಟವಶಾತ್ ಈಗ ಕೇವಲ ಶೇ.10ರಷ್ಟು ಮಂದಿಗೆ ಮಾತ್ರ ಪ್ರಶಾಮಕ ಆರೈಕೆ ದೊರೆಯುತ್ತಿದೆ. ಕೆಎಂಸಿಯಲ್ಲಿ ನಾವು ಮೊದಲಿಗೆ ವಿಶೇಷವಾಗಿ ಕ್ಯಾನ್ಸರ್ ರೋಗಿಗಳಿಗೆ ಪ್ರಶಾಮಕ ಚಿಕಿತ್ಸೆಯನ್ನು ಆರಂಭಿಸಿದೆವು.ಈ ಸೌಲಭ್ಯವನ್ನೀಗ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ ಇತರ ಕಾಯಿಲೆಯವರಿಗೂ ವಿಸ್ತರಿಸಿದ್ದೇವೆ ಎಂದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಮುಖ್ಯಸ್ಥ ಡಾ. ನವೀನ್ ಎಸ್ ಸಾಲಿನ್ಸ್ ಮತ್ತು ಡಾ ಸೀಮಾ ರಾವ್ ಉಪಸ್ಥಿತರಿದ್ದರು.

ಪ್ರಶಾಮಕ ಆರೈಕೆಯ ಪ್ರಯೋಜನವನ್ನು ಪಡೆದುಕೊಂಡ ರೋಗಿಗಳ ಸಂಬಂಧಿಕರು ತಮ್ಮ ಅನುಭವವನ್ನು ಹಂಚಿಕೊಂಡರು. ಡಾ. ಸೀಮಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News