ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಯಾವ ತ್ಯಾಗಕ್ಕೂ ಸಿದ್ಧ: ಸೊರಕೆ

Update: 2020-10-10 13:40 GMT

ಉದ್ಯಾವರ, ಅ.10: ದೇಶದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರಗಳು ಈ ದೇಶದ ಸಂವಿಧಾನವನ್ನು ಶಿಥಿಲಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ. ಸಂವಿಧಾನ ಶಿಥಿಲವಾದರೆ ದೇಶದ ಪ್ರಜಾಪ್ರಭುತ್ವ ನಾಶವಾಗಿ ಸರ್ವಾಧಿಕಾರಕ್ಕೆ ದಾರಿ ಮಾಡಿ ಕೊಡುತ್ತದೆ. ದೇಶದ ಬಡ ಜನತೆಯ ಬದುಕು ಛಿದ್ರವಾಗುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲ. ಈ ದೇಶದ ಆತ್ಮವಾದ ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವ ತ್ಯಾಗಕ್ಕೂ ಸಿದ್ಧ ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಉದ್ಯಾವರ ಗ್ರಾಮ ವ್ಯಾಪ್ತಿಯ 13 ಬೂತುಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಮುಂಬರುವ ಪಂಚಾಯತ್ ಚುನಾವಣೆ ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ. ದೇಶ ಮತ್ತು ರಾಜ್ಯದಲ್ಲಿ ಪ್ರಜಾಪ್ರಭುತ್ವವೇ? ಅಥವಾ ಸರ್ವಾಧಿಕಾರವೇ ? ಎಂಬ ಪ್ರಶ್ನೆಗೆ ಚುನಾವಣೆ ಉತ್ತರ ಕೊಡುತ್ತದೆ. ನಾವು ಪ್ರಜಾಪ್ರಭುತ್ವದ ಕಟ್ಟಕಡೆಯ ಸ್ತರವಾದ ಪಂಚಾಯತ್‌ನ್ನು ಬಲ ಪಡಿಸಿದಲ್ಲಿ ಮಾತ್ರ ಈ ದೇಶ ಉಳಿಯಬಹುದು ಎಂದು ವಿನಯ ಕುಮಾರ್ ಸೊರಕೆ ತಿಳಿಸಿದರು.

ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವಂತೂ ಕೊರೋನಾ ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸಲಾಗದೆ ಸೋತಿದೆ. ಜನ ಆತಂಕದಿಂದ ಬದುಕುತ್ತಿದ್ದಾರೆ ಆದರೆ ಸರಕಾರ ಈ ರೋಗವನ್ನು ದಂಧೆಯನ್ನಾಗಿ ಪರಿವರ್ತಿಸಿ ಕೊಂಡು ದಿನವನ್ನು ಕಳೆಯುತ್ತಿದೆ. ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸಿ ಸರಕಾರವನ್ನು ರಚಿಸಿದ ರಾಜ್ಯ ಸರಕಾರ ಅಭಿವೃದ್ಧಿಯ ದೂರದರ್ಶಿತ್ವ ಇಲ್ಲದೆ ಆಡಳಿತದಲ್ಲಿ ಸೋತಿದೆ ಎಂದರು.

ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಸ್ತುವಾರಿಗಳೂ ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷರೂ ಆದ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ನಾಡಿನ ಯುವ ಜನರ ಭಾವನೆಗಳನ್ನು ಕೆರಳಿಸುವ ಮೂಲಕ ಅದನ್ನು ಮತವನ್ನಾಗಿ ಪರಿವರ್ತಿಸಿ ದೇಶದ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಅಭಿವೃದ್ಧಿಯಲ್ಲಿ ಸೋತಿದ್ದಾರೆ. ಕೇವಲ ಪ್ರಚಾರದ ಮೂಲಕ ‘ದೇವರಾದ’ ಅವರು ನಿಜಾರ್ಥದಲ್ಲಿ ಶೂನ್ಯ ರಾಗಿದ್ದಾರೆ. ಇದು ಈಗ ಜನಕ್ಕೆ ಅರ್ಥವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಉತ್ತರವನ್ನು ಕೊಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರೋಯ್ಸೆ ಫೆರ್ನಾಂಡಿಸ್, ಕಾರ್ಯಾಧ್ಯಕ್ಷ ಯು.ಆರ್. ಚಂದ್ರಶೇಖರ್, ಲೋರೆನ್ಸ್ ಡೇಸಾ, ಶಿವರಾಮ ಕುಂದರ್, ಉಪಾಧ್ಯಕ್ಷರಾದ ಚಂದ್ರಾವತಿ ಎಸ್. ಭಂಡಾರಿ, ಸುಗಂಧಿ ಶೇಖರ್, ಜ್ಯೋತಿ ಆನಂದ, ಕಾಯದರ್ಶಿ ರಿಯಾಝ್ ಪಳ್ಳಿ, ಆಬಿದ್ ಆಲಿ, ಭಾಸ್ಕರ ಕೋಟ್ಯಾನ್, ಅನ್ಸಾರ್ ಸತ್ತಾರ್, ಲಕ್ಷಣ ಪೂಜಾರಿ,ಹೆಲೆನ್ ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News