ಅಭಿವೃದ್ಧಿ ಹೆಸರಿನಲ್ಲಿ ಶಾಸಕರಿಗೆ ಕಮಿಷನ್: ಮಂಜುನಾಥ ಪೂಜಾರಿ ಆರೋಪ

Update: 2020-10-10 14:04 GMT

ಹೆಬ್ರಿ, ಅ.10: ಕೋಟ್ಯಾಂತರ ರೂ. ವೆಚ್ಚದ ಎಣ್ಣೆಹೊಳೆಯ ಅಸಮರ್ಪಕ ಏತ ನೀರಾವರಿ ಯೋಜನೆಯನ್ನು ವಿರೋಧಿಸಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಣ್ಣೆಹೊಳೆಯಲ್ಲಿ ನಿವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಅಭಿವೃದ್ಧಿ, ಯೋಜನೆಗಳ ಅನುಷ್ಠಾನದ ಹೆಸರಿನಲ್ಲಿ ಶಾಸಕ ಸುನೀಲ್ ಕುಮಾರ್ ಮತ್ತು ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಕಮೀಷನ್ ದಂಧೆಯಲ್ಲಿ ನಿರತರರಾಗಿದ್ದಾರೆ. ಹಣ ಮಾಡುವುದೇ ಅವರ ಉದ್ದೇಶವೇ ಹೊರತು ಜನರ ಸಂಕಷ್ಟ ಅರ್ಥ ಆಗುತ್ತಿಲ್ಲ. ಲಾಕ್‌ಡೌನ್ ಆಹಾರದ ಕಿಟ್ ವಿತರಣೆಯಲ್ಲೂ ಹಣ ದೋಚಿರುವ ಇವರು, ಪ್ರತಿ ಕಾಮಗಾರಿಯಲ್ಲೂ ಹಣದ ಲೂಟಿ ವಾಡುತ್ತಿದ್ದಾರೆ ಎಂದು ಆರೋಪಿಸಿದರು.

107 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಏತ ನೀರಾವರಿ ಯೋಜನೆ ಯಿಂದ ರೈತರ ಸಹಿತ ಜನತೆಗೆ ಯಾವುದೇ ಪ್ರಯೋಜನವಿಲ್ಲ. ಯಾವುದೇ ಪೂರ್ವ ತಯಾರಿ ಮಾಡದೇ ಯೋಜನೆಯನ್ನು ಸಿದ್ಧ ಪಡಿಸಲಾಗಿದೆ. ಮಳೆಗಾಲ ದಲ್ಲಿ ನೀರು ತುಂಬಿ ಪೇಟೆಯ ಮನೆಗಳ ಸಹಿತ ಹಲವು ಪ್ರದೇಶ ಮುಳುಗಡೆ ಯಾಗುತ್ತದೆ. ಬೇಸಗೆ ಕಾಲದಲ್ಲಿ ನೀರು ನಿಲ್ಲುವುದಿಲ್ಲ. ಆದುದರಿಂದ ಈ ಯೋಜನೆಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಬೇಕೆಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ನಾಯಕ ಕಾರ್ಕಳದ ಸುಭೋದ್ ರಾವ್ ಮಾತನಾಡಿ, ಕಾರ್ಕಳ ಕ್ಷೇತ್ರದಲ್ಲಿ ಅಭಿವೃದ್ಧಿ ಅಂದರೆ ಕೇವಲ ಮಾತಾಗಿದೆ. ಕೋಟ್ಯಾಂತರ ರೂ.ನಲ್ಲಿ ಕುಟುಂಬದ ಹೆಸರಿನಲ್ಲಿ ಭವ್ಯ ಬಂಗಲೆ ನಿರ್ಮಾಣ, ಕೊರೊನಾ ಕಾಲದಲ್ಲೂ ಬಡವರ ಹೆಸರಿನ ಆಹಾರದ ಕಿಟ್ನಲ್ಲಿ ವಂಚನೆ, ಕಮೀಷನ್ ದಂಧೆ, ಅಕ್ರಮಗಳ ಮಹಾಪೂರವೇ ನಡೆಯುತ್ತಿದೆ. ಜನರ ಬದುಕಿಗೆ ಮಾರಕವಾಗುವ ಯಾವೂದೇ ಯೋಜನೆಯನ್ನು ಅನುಷ್ಠಾನ ಮಾಡಲು ಬಿಡುವುದಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಡಾ.ಸಂತೋಷ ಕುಮಾರ್ ಶೆಟ್ಟಿ, ರವಿಶಂಕರ್ ಶೇರಿಗಾರ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೃಷ್ಣಮೂರ್ತಿ, ಮುಖಂಡರಾದ ಪ್ರಕಾಶ ಪೂಜಾರಿ ಕೆರ್ವಾಸೆ, ಸುಜಾತ ಲಕ್ಷ್ಮಣ್ ಆಚಾರ್ಯ ವರಂಗ, ರಾಘವ ದೇವಾಡಿಗ, ರಾಮಕೃಷ್ಣ ಶೆಟ್ಟಿ ಅಜೆಕಾರು, ಗಫೂರ್ ಅಜೆಕಾರು, ಶಶಿಕಲಾ ಡಿ. ಪೂಜಾರಿ, ಎಚ್.ಜನಾರ್ದನ್ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನಾ ಎಣ್ಣೆಹೊಳೆ ಪೇಟೆಯಲ್ಲಿ ಯೋಜನೆಯ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News