‘‘ಭವಿಷ್ಯದ ಹೆಣ್ಣುಮಕ್ಕಳ ಸಮಾನತೆಗಾಗಿ-ನನ್ನ ದನಿ’’

Update: 2020-10-10 19:30 GMT

ಗಂಡು ಮತ್ತು ಹೆಣ್ಣುಮಕ್ಕಳ ನಡುವಿನ ಪ್ರಮಾಣದಲ್ಲಿ ಅಗಾಧ ವ್ಯತ್ಯಾಸದಿಂದಾಗಿ ಹೆಣ್ಣಿನ ಮೇಲಿನ ದೌರ್ಜನ್ಯದ ಪ್ರಮಾಣ ವ್ಯಾಪಕವಾಗಿ ಹೆಚ್ಚುತ್ತಿದೆ. ದಶಕಗಳ ಹಿಂದೆ ಸ್ತ್ರೀ ಸಮಾನತೆ, ಸ್ವಾತಂತ್ರ್ಯದ ಕುರಿತು ಹೋರಾಟಗಳು ನಡೆಯುತ್ತಿದ್ದುದು, ಈಗ ದೌರ್ಜನ್ಯ ಮತ್ತು ಅತ್ಯಾಚಾರದಿಂದ ರಕ್ಷಣೆಗಾಗಿ ಹೋರಾಟ ಪ್ರತಿರೋಧಗಳು ನಡೆಯುವ ಸ್ಥಿತಿಯನ್ನು ತಲುಪಿರುವುದು ಭಾರತ ಮಾನವೀಯತೆ ಮತ್ತು ನಾಗರಿಕತೆಯ ವಿಷಯದಲ್ಲಿ ಹಿನ್ನಡೆಯುತ್ತಿರುವುದರ ಸ್ಪಷ್ಟ ಸೂಚಕದಂತೆ ಕಾಣುತ್ತಿದೆ.


ಪ್ರತಿ ವರ್ಷದ ಅಕ್ಟೋಬರ್ 11ನ್ನು ವಿಶ್ವ ಹೆಣ್ಣುಮಗುವಿನ ದಿನವೆಂದು ವಿಶ್ವಸಂಸ್ಥೆ ಘೋಷಿಸಿದೆ. ವಿಶ್ವ ಮಹಿಳಾ ದಿನ, ವಿಶ್ವ ಮಗಳ ದಿನ, ವಿಶ್ವ ಪರಿಸರ ದಿನ, ವಿಶ್ವ ಪ್ರಾಣಿದಿನ, ವಿಶ್ವ ಭೂದಿನ, ವಿಶ್ವ ಜಲದಿನ, ವಿಶ್ವ ಹೆಣ್ಣುಮಗುವಿನ ದಿನ..... ಈ ಬಗೆಯ ದಿನಾಚರಣೆಗಳನ್ನು ರೂಢಿಗೆ ತರಲು ಕಾರಣವೇನೆಂದು ಕೊಂಚ ಯೋಚಿಸಿ. ಹೊಳೆಯುವ ಮುಖ್ಯ ಅಂಶವೆಂದರೆ ಯಾವುದರ ಸ್ಥಿತಿ ಹೆಚ್ಚು ಗಂಡಾಂತರಕಾರಿಯಾಗಿದೆಯೋ, ಗಂಭೀರವಾಗಿದೆಯೋ, ಯಾವುದರ ಜೀವ ಆತಂಕದಲ್ಲಿದೆಯೋ, ಯಾವುದು ವಿನಾಶದ ಅಂಚಿನಲ್ಲಿದೆಯೋ... ಅಂತಹವುಗಳ ಕುರಿತು ದಿನಾಚರಣೆಯ ನೆಪದಲ್ಲಿ ಅವುಗಳ ಹಕ್ಕು, ಉಳಿವು, ರಕ್ಷಣೆ, ಅವುಗಳೆಡೆಗೆ ಸಮುದಾಯದ ಕರ್ತವ್ಯ, ಜಾಗೃತಿಗಳ ಕುರಿತು ಅವಲೋಕನ ಮಾಡಿಕೊಳ್ಳುವ ತುರ್ತಿಗಾಗಿ ಇಂತಹ ದಿನಾಚರಣೆಗಳನ್ನು ಜಾರಿಗೆ ತರಲಾಗಿರುವುದು ಗೋಚರಿಸುತ್ತದೆ! ಇದು, ಮರು ಸೃಷ್ಟಿಸುವ ಚೈತನ್ಯವಿರುವ ಪ್ರಕೃತಿ ಮತ್ತು ಹೆಣ್ಣು ಎರಡರ ಸ್ಥಿತಿಯೂ ದಿನದಿಂದ ದಿನಕ್ಕೆ ಗಂಡಾಂತರದ ಸ್ಥಿತಿ ತಲುಪಿರುವುದರ ಸೂಚಕವೂ ಆಗಿದೆ. ಈ ಹಿನ್ನೆಲೆಯಲ್ಲಿ ಅವುಗಳ ದಿನಾಚರಣೆಗಳನ್ನು ಘೋಷಿಸಿರುವುದೇನೋ ಸರಿ. ಆದರೆ ಆಚರಣೆ ಒಂದು ದಿನಕ್ಕಷ್ಟೇ ಸೀಮಿತವಾಗದೇ ಪ್ರತಿ ದಿನದ, ಪ್ರತಿ ಕ್ಷಣದ ಜಾಗೃತಿಯಾಗಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿದರಷ್ಟೇ ಬದಲಾವಣೆ ಸಾಧ್ಯವಾದೀತು.

‘‘ಭವಿಷ್ಯದ ನಮ್ಮ ಸಮಾನತೆಗಾಗಿ-ನನ್ನ ದನಿ’’ ಎಂಬುದು ಈ ಬಾರಿಯ ವಿಶ್ವ ಹೆಣ್ಣುಮಗುವಿನ ದಿನದ ಘೋಷಣೆಯಾಗಿದೆ. ಪ್ರತಿ ಹೆಣ್ಣುಮಗುವೂ ತನ್ನ ಹಕ್ಕುಗಳ ಕುರಿತು ಜಾಗೃತಿ ಪಡೆದು, ಅದರ ಅನುಷ್ಠಾನಕ್ಕಾಗಿ ಎದ್ದು ನಿಲ್ಲುವುದು, ಅದಕ್ಕಾಗಿ ದನಿ ಎತ್ತುವುದು, ಹೋರಾಟಕ್ಕೆ ಸಜ್ಜಾಗುವುದು ಇದರ ಹಿಂದಿನ ಉದ್ದೇಶ. ಆದರೆ ಭಾರತದಂತಹ ಪುರುಷ ಪ್ರಧಾನ, ಪುರುಷ ಕೇಂದ್ರಿತ ಸಮಾಜದಲ್ಲಿ ಹೆಣ್ಣು ಬದಲಾಗುವಷ್ಟು, ಆಧುನಿಕತೆಗೆ ತೆರೆದುಕೊಳ್ಳುವಷ್ಟು ವೇಗವಾಗಿ ನಮ್ಮ ಪುರುಷ ಮನಸ್ಸುಗಳು ಬದಲಾಗುವುದಿಲ್ಲವೆಂಬುದು ನಿರ್ವಿವಾದ. ಪುರುಷಲೋಕಕ್ಕೆ ಬೇಕೆಂದಂತೆ ಸೃಷ್ಟಿಯಾದ, ನಮ್ಮ ಸಮಾಜದ ಸಂಪ್ರದಾಯ, ಧಾರ್ಮಿಕ ಆಚರಣೆ, ಲಿಂಗ ಅಸಮಾನತೆ, ಸಂಸ್ಕೃತಿಯ ಹೆಸರಿನ ನಿರ್ಬಂಧಗಳು ಹೆಣ್ಣಾದ ಕಾರಣಕ್ಕೇ ಚೌಕಟ್ಟುಗಳ ಸಂಕೋಲೆಯೊಳಗೆ ಇರಿಸಿಬಿಡುತ್ತವೆ. ಇದಕ್ಕೆ ಬಾಲ್ಯವಿವಾಹ, ಸತಿಸಹಗಮನ, ಬಸವಿ/ದೇವದಾಸಿ ಪದ್ಧತಿಗಳ ಉದಾಹರಣೆಗಳಿವೆ. ಅಸಮಾನ ವ್ಯವಸ್ಥೆಯನ್ನು ಪ್ರಶ್ನಿಸುವ, ಚೌಕಟ್ಟುಗಳನ್ನು ಧಿಕ್ಕರಿಸಿ ಆಚೆ ಹೋಗಲು ಪ್ರಯತ್ನಿಸುವ ಹೆಣ್ಣನ್ನು ಮತ್ತೆ ಚೌಕಟ್ಟಿನೊಳಗೇ ಇರಿಸಲು ಪ್ರಯತ್ನಿಸುತ್ತಿರುವ ಕ್ರೌರ್ಯ ಮತ್ತು ಇದನ್ನು ಪ್ರತಿರೋಧಿಸುವಾಗ ಉಂಟಾಗುತ್ತಿರುವ ಘರ್ಷಣೆ, ದಿನದಿಂದ ದಿನಕ್ಕೆ ಹೆಣ್ಣಿನ ಮೇಲೆ ಇನ್ನಷ್ಟು ದೌರ್ಜನ್ಯ ಮತ್ತು ಹಿಂಸೆಗೆ ಎಡೆಮಾಡಿಕೊಡುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ.

ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಹಿಂಸೆ, ಕಳ್ಳಸಾಗಣೆ, ವೇಶ್ಯಾವಾಟಿಕೆಗೆ ದೂಡುವ ಪ್ರಮಾಣ ಹೆಚ್ಚುತ್ತಿರುವುದು ಏನನ್ನು ಸೂಚಿಸುತ್ತದೆ? ಹೆಣ್ಣುಮಕ್ಕಳು ಈ ದೇಶದಲ್ಲಿ ಸುರಕ್ಷಿತವಾಗಿಲ್ಲ ಎಂದು ತಾನೇ? ಜೊತೆಗೆ ಹೆಣ್ಣೆಂದು ಗೊತ್ತಾದೊಡನೆ ಗರ್ಭದಲ್ಲೇ ಕೊಂದು ಬಿಸುಟುತ್ತಿರುವ ಪ್ರವೃತ್ತಿಯಿಂದಾಗಿ ಹೆಣ್ಣುಮಕ್ಕಳು ಭೂಮಿಗೆ ಕಾಲಿಡುವ ಪ್ರಮಾಣವೇ ಗಾಬರಿಗೊಳ್ಳುವಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಗಂಡು ಮತ್ತು ಹೆಣ್ಣುಮಕ್ಕಳ ನಡುವಿನ ಪ್ರಮಾಣದಲ್ಲಿ ಅಗಾಧ ವ್ಯತ್ಯಾಸದಿಂದಾಗಿ ಹೆಣ್ಣಿನ ಮೇಲಿನ ದೌರ್ಜನ್ಯದ ಪ್ರಮಾಣ ವ್ಯಾಪಕವಾಗಿ ಹೆಚ್ಚುತ್ತಿದೆ. ದಶಕಗಳ ಹಿಂದೆ ಸ್ತ್ರೀ ಸಮಾನತೆ, ಸ್ವಾತಂತ್ರ್ಯದ ಕುರಿತು ಹೋರಾಟಗಳು ನಡೆಯುತ್ತಿದ್ದುದು, ಈಗ ದೌರ್ಜನ್ಯ ಮತ್ತು ಅತ್ಯಾಚಾರದಿಂದ ರಕ್ಷಣೆಗಾಗಿ ಹೋರಾಟ ಪ್ರತಿರೋಧಗಳು ನಡೆಯುವ ಸ್ಥಿತಿಯನ್ನು ತಲುಪಿರುವುದು ಭಾರತ ಮಾನವೀಯತೆ ಮತ್ತು ನಾಗರಿಕತೆಯ ವಿಷಯದಲ್ಲಿ ಹಿನ್ನಡೆಯುತ್ತಿರುವುದರ ಸ್ಪಷ್ಟ ಸೂಚಕದಂತೆ ಕಾಣುತ್ತಿದೆ.

ಇಂದು ಹೆಣ್ಣುಮಕ್ಕಳು ದಿಟ್ಟವಾಗಿ ತಮಗೆ ಸಂವಿಧಾನಾತ್ಮಕವಾಗಿ, ನ್ಯಾಯಯುತವಾಗಿ ಸಲ್ಲಬೇಕಾದ ಹಕ್ಕುಗಳನ್ನು, ಸಮಾನತೆಯನ್ನು ಕೇಳುತ್ತಿದ್ದಾರೆ, ಪುರುಷನಷ್ಟೇ ಅನಿಯಂತ್ರಿತವಾಗಿ ಸಮಾಜದೊಳಗೆ ಬೆರೆಯುತ್ತಿದ್ದಾರೆ ಎಂಬುದೇ ಅನೇಕ ಸಂಪ್ರದಾಯಸ್ಥ ಮನಸ್ಸುಗಳಿಗೆ ಸಹಿಸದ ವಿಚಾರವಾಗಿ ಅವಳ ಮೇಲಿನ ಹಿಂಸೆ ಹೆಚ್ಚುತ್ತಿರುವುದಕ್ಕೆ ದಿನ ನಿತ್ಯ ಉದಾಹರಣೆಗಳನ್ನು ಕಾಣುತ್ತಿದ್ದೇವೆ. ಪುರುಷ ಸ್ಥಾಪಿತ ಧೋರಣೆಗಳನ್ನು ದಾಟಿ ಹೆಣ್ಣು ತನ್ನ ಅಸ್ಮಿತೆಯನ್ನು ಛಾಪಿಸುವುದಕ್ಕೆ, ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಇನ್ನೂ ಬಹು ದೀರ್ಘ ಹಾದಿಯನ್ನು ಸವೆಸಬೇಕಿದೆ. ಈ ಹಾದಿಯಲ್ಲಿ ಹಲವು ಸಂಘರ್ಷವಿರುತ್ತದೆ. ಮತ್ತೆ ಮತ್ತೆ ಅವಳನ್ನು ಮೇಲೇಳದಂತೆ ಘಾಸಿಗೊಳಿಸಲಾಗುತ್ತದೆ. ಅನೇಕರ ಬಲಿ ಪಡೆಯಲಾಗುತ್ತದೆ. ಆದರೆ ಅದಕ್ಕೆ ಹೆಣ್ಣು ದಿಕ್ಕೆಟ್ಟಿಲ್ಲ. ಬದಲಿಗೆ ಎಷ್ಟೇ ಕಷ್ಟವಾದರೂ ಇನ್ನಷ್ಟು ದಿಟ್ಟವಾಗಿ ಪ್ರತಿರೋಧದ ದನಿಯನ್ನು ಎತ್ತುತ್ತಿದ್ದಾಳೆ ಎಂಬುದು ಗಮನಾರ್ಹವಾದುದು.

ಇನ್ನೊಂದೆಡೆ ಜಾಗತೀಕರಣದ ಮುಕ್ತ ಆರ್ಥಿಕ ನೀತಿಗಳು ಹೆಣ್ಣನ್ನು ಮಾರಾಟದ ಸರಕನ್ನಾಗಿಸುತ್ತಿವೆ. ಅದರಿಂದ ತಪ್ಪಿಸಿಕೊಂಡು, ಘನತೆಯುತ ಧೀಮಂತ ವ್ಯಕ್ತಿತ್ವ ರೂಪಿಸಿಕೊಳ್ಳುವ ತುರ್ತು, ಹೆಣ್ಣು ಸಂಕುಲದ ಮುಂದಿರುವ ಬಹು ದೊಡ್ಡ ಸವಾಲು. ಅವಳನ್ನೊಂದು ಭೋಗದ ವಸ್ತುವೆಂಬಂತೆ ರೂಪಿಸುತ್ತಿರುವ ಮಾರುಕಟ್ಟೆ ವ್ಯವಸ್ಥೆ, ಮಾಧ್ಯಮಗಳ ಹುನ್ನಾರಗಳು, ಆಧುನಿಕ ಸಮಾಜವನ್ನು ಭ್ರಮಾಮಿಥ್ಯಕ್ಕೆ ನೂಕಿ, ಮತ್ತೆ ಮತ್ತೆ ಊಹೆಗೂ ನಿಲುಕದಂತಹ ದೌರ್ಜನ್ಯಗಳಿಗೆ ಹೆಣ್ಣನ್ನು ಸಿಲುಕಿಸುತ್ತಿದೆ. ಈ ಎಲ್ಲ ದಿಕ್ಕುಗಳ ಶೂಲಗಳ ಇರಿತವನ್ನು ತಪ್ಪಿಸಿಕೊಂಡು ಅಥವಾ ಅದನ್ನು ಎದುರಿಸಿ ಎದೆಯೊಡ್ಡಿ ಇಲ್ಲಿ ಹೆಣ್ಣು ಬದುಕುವುದು ಸುಲಭವಲ್ಲ! ಪ್ರತಿ ಹೆಣ್ಣಿನ ಸಮಸ್ಯೆಯೂ ವಿಭಿನ್ನವಾಗಿರುವುದರಿಂದ ಒಂದೇ ತಕ್ಕಡಿಯಲ್ಲಿಟ್ಟು ಎಲ್ಲವನ್ನೂ ತೂಗುವುದು ಕೂಡ ತಪ್ಪು. ಸಮಕಾಲೀನ ಅಭಿವೃದ್ಧಿ ಪರಿಕಲ್ಪನೆ ಕೂಡ ಇಂದಿಗೂ ಹೆಣ್ಣನ್ನು ಒಳಗೊಂಡು ಯೋಚಿಸುತ್ತಿಲ್ಲ.

ವಿವಿಧ ಕ್ಷೇತ್ರಗಳ ಅಭಿವೃದ್ಧಿಯಂತೆಯೇ ಹೆಣ್ಣನ್ನು ಒಂದು ವಸ್ತು ಮತ್ತು ವರ್ಗವಾಗಿ ನೋಡದೆ ಮಾನವ ಸಂಪತ್ತಾಗಿ ಪರಿಗಣಿಸಿದಾಗ ಮತ್ತು ಹೆಣ್ಣಿನ ಸಂಕಟಗಳನ್ನು ಅಂತಃಕರಣದ ನೆಲೆಯಲ್ಲಿ ಗ್ರಹಿಸಿದಾಗ ಮಾತ್ರ ಅಭಿವೃದ್ಧಿಯ ಪರಿಕಲ್ಪನೆಗಳು ಬದಲಾಗಿ ಹೆಣ್ಣನ್ನೂ ಸಮಾಜ ನಿರ್ಮಾಣದ ಕ್ರಿಯೆಯಲ್ಲಿ ಸಮಾನವಾಗಿ ಒಳಗೊಳ್ಳುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇಲ್ಲದಿದ್ದರೆ ಹೆಣ್ಣನ್ನು ಜೀತದ ಹಂತದಲ್ಲಿ ಮಾತ್ರ ಇರಿಸಿ, ಗುಲಾಮರಂತೆ ದುಡಿಸಿಕೊಳ್ಳುವ ಉಪಾಯಗಳು ಮುಂದುವರಿಯುತ್ತವೆ. ಈಗಿನ ಅಭಿವೃದ್ಧಿ ಯೋಜನೆಗಳು ಹೆಣ್ಣುಮಕ್ಕಳಿಗೆ ಏನೋ ಒಂದಷ್ಟು ಬಜೆಟ್‌ನಲ್ಲಿ ಎತ್ತಿಟ್ಟು ನೀಡಿ ಉಪಕಾರ ಮಾಡುತ್ತಿರುವ ಉದಾರವಾದಿ ನೆಲೆಯಿಂದ ಸೃಷ್ಟಿಯಾಗುತ್ತಿವೆಯೇ ಹೊರತು ಅವರ ಉಜ್ವಲ ಭವಿಷ್ಯ, ರಕ್ಷಣೆ, ಘನತೆಯುತ ಬದುಕಿನ ಭರವಸೆ ನೀಡುವಲ್ಲಿ ಸೋಲುತ್ತಿವೆ. ಯಾವುದೇ ಯೋಜನೆಯೂ ಸಾಮುದಾಯಿಕವಾಗಿ ಹೆಣ್ಣಿನ ಹಕ್ಕು, ಸಮಾನವಾದ ಅವಕಾಶ ಮತ್ತು ಸಾಧ್ಯತೆಗಳ ವಿಸ್ತಾರಕ್ಕೆ ಪೂರಕವೆಂಬಂತೆ ರೂಪಿತವಾಗುತ್ತಿಲ್ಲವೆಂಬುದೇ ವಿಷಾದನೀಯ.

ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣಪ್ರದೇಶದ ಹೆಣ್ಣುಮಕ್ಕಳ ಸಮಸ್ಯೆಗಳು ನಗರಪ್ರದೇಶದ ಹೆಣ್ಣುಮಕ್ಕಳ ಸಮಸ್ಯೆಗಳಿಗಿಂತ ಹೆಚ್ಚು ತೀವ್ರ, ಗಂಭೀರ ಮತ್ತು ಭಿನ್ನ ಎಂಬುದನ್ನು ಯಾವುದೇ ಸರಕಾರಗಳು ಪರಿಗಣಿಸದಿರುವುದು ದುರಂತ. ಹೆಣ್ಣುಮಕ್ಕಳ ಶಿಕ್ಷಣವನ್ನು ಸರಕಾರಗಳು ಇನ್ನೂ ಹೆಚ್ಚು ಗಂಭೀರವಾಗಿ ಪರಿಗಣಿಸಿಲ್ಲ. ವಿವಿಧ ಕಾರಣಗಳಿಗಾಗಿ ಶಾಲೆ ಸೇರದಿರುವ, ಬಿಟ್ಟಿರುವ ಹೆಣ್ಣುಮಕ್ಕಳ ಸಮಸ್ಯೆಯನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡಿ ಅವರೆಲ್ಲರಿಗೆ ಮೂಲಭೂತ ಶಿಕ್ಷಣದ ಜೊತೆಗೆ ವೃತ್ತಿಶಿಕ್ಷಣ ತರಬೇತಿಯನ್ನೂ ನೀಡಿ ಆರ್ಥಿಕ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಿಸಬೇಕಿರುವುದು ಇಂದಿನ ತುರ್ತು. ಇಲ್ಲದಿದ್ದಾಗ ಅಭಿವೃದ್ಧಿ ಏಕಮುಖೀ ಪ್ರಕ್ರಿಯೆಯಾಗಿ ಮಾತ್ರ ಉಳಿಯುತ್ತದೆ. ಅಂಚಿನಲ್ಲಿರುವ ಹೆಣ್ಣುಮಕ್ಕಳು ಮುಖ್ಯವಾಹಿನಿಯ ಅಭಿವೃದ್ಧಿ ವ್ಯಾಖ್ಯೆಯಡಿ ಬರಲು ಸಾಧ್ಯವೇ ಆಗುವುದಿಲ್ಲ. ಹೆಣ್ಣುಮಕ್ಕಳ ಶೋಷಣೆ ಇಂದು ಹೆಚ್ಚು ಸೂಕ್ಷ್ಮವೂ ಸಂಕೀರ್ಣವೂ ಆಗಿದೆ. ಅದು ಬಹಿರಂಗವಾಗಿ ನಡೆಯುವುದಕ್ಕಿಂತ ಕಣ್ಣಿಗೆ ಕಾಣದಂತೆ ನಡೆಯುತ್ತದೆ! ನಿಜವಾದ ಶತ್ರು ಯಾರು ಎಂದು ಅರಿಯದೆ ಹೋರಾಟ ಮಾಡುವ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ.

ಹೀಗಾಗಿ ನಿರೀಕ್ಷಿತ ವೇಗದಲ್ಲಿ ಹಿಂಸೆಯಿಂದ ಮುಕ್ತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ಹೆಣ್ಣುಮಕ್ಕಳ ಸಮಸ್ಯೆ ವಿಭಿನ್ನವಾದುದರಿಂದ ನಾವು ಅವರನ್ನು ಇಡಿಯಾಗಿ ತೂಗಿ ನೊಡುವ ಪರಿಕಲ್ಪನೆಯಲ್ಲೇ, ಒಟ್ಟಾಗಿ ಸಮಸ್ಯೆಗೆ ಪರಿಹಾರವನ್ನು ಘೋಷಿಸುವ ವಿಧಾನದಲ್ಲೇ ದೋಷವಿದೆ. ನಮ್ಮ ದೇಶದಲ್ಲಿ ವೈವಾಹಿಕ ಮತ್ತು ಕೌಟುಂಬಿಕ ವ್ಯವಸ್ಥೆ ಅವಳನ್ನು ಹೆಚ್ಚು ಅಧೀನಳನ್ನಾಗಿಯೂ, ಪರಾವಲಂಬಿಯನ್ನಾಗಿಯೂ, ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿಟ್ಟತೆಯನ್ನು ಬೆಳೆಸದಂತೆಯೂ ಇರುವುದರಿಂದ ಹೆಣ್ಣಿನ ಅಭಿವೃದ್ಧಿ ಪರಿಕಲ್ಪನೆಯೇ ಮುಕ್ಕಾಗಿರುವಂತದ್ದಾಗಿದೆ! ಗ್ರಾಮೀಣಪ್ರದೇಶಗಳಲ್ಲಿ ಮೂಲಭೂತ ಅವಶ್ಯಕತೆಗಳಾದ ನೀರು, ಉರುವಲು, ಶೌಚಾಲಯಗಳ ಸಮರ್ಪಕ ಪೂರೈಕೆ ಇಂದಿಗೂ ಸರಿಯಾಗಿ ಆಗಿಲ್ಲವಾದ್ದರಿಂದ, ಹೆಣ್ಣುಮಕ್ಕಳು ನೀರು, ಉರುವಲನ್ನು ಸಂಗ್ರಹಿಸಲೆಂದೇ ಮೈಲಿಗಟ್ಟಲೆ ನಡೆದು, ದಿನಗಟ್ಟಲೆ ಸಮಯವನ್ನೂ ಅದಕ್ಕಾಗಿ ಮೀಸಲಿಡಬೇಕಾದಂತಹ ಪರಿಸ್ಥಿತಿ ಇಂದಿಗೂ ಹೆಚ್ಚಿನ ಪ್ರಮಾಣದಲ್ಲಿ ಇದೆ. ಅದು ಹೆಣ್ಣುಮಕ್ಕಳ ಶಿಕ್ಷಣ, ಯಾವುದೇ ರೀತಿಯ ಆರ್ಥಿಕ ಚಟುವಟಿಕೆ, ಕೌಶಲ್ಯ ತರಬೇತಿಯಲ್ಲಿ ತೊಡಗಿಕೊಳ್ಳದಂತೆ ಮಾಡುತ್ತದೆ! ಹೀಗಾಗಿ ಅವಳು ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದುಡಿದರೂ, ಅದಕ್ಕೆ ತಕ್ಕ ಮೌಲ್ಯವನ್ನು ಪಡೆಯದೇ, ಆರ್ಥಿಕ ಕಕ್ಷೆಯೊಳಗೆ ಬಾರದೇ ಅಭಿವೃದ್ಧಿ ಪ್ರಕ್ರಿಯೆಯಿಂದ ಹೊರಗೇ ಉಳಿದು ಬಿಡುತ್ತಾಳೆ! ಮೂಲಭೂತ ಅವಶ್ಯಕತೆಯ ಪೂರೈಕೆಗಿಂತ ಮದ್ಯವನ್ನು ಪ್ರತಿ ಹಳ್ಳಿಗೂ ಸರಬರಾಜು ಮಾಡುವ ಲಾಭದ ಹಿತದೃಷ್ಟಿಯ ಪುರುಷಾಧಿಕಾರದ ಚಲಾವಣೆಯಿಂದ ತನ್ನ ತಪ್ಪಿಲ್ಲದೆಯೂ ಹೆಣ್ಣು ಕುಟುಂಬದ ಪುರುಷರ ಮದ್ಯಪಾನ ಚಟದ ಬಲಿಪಶುವಾಗಬೇಕಾಗುತ್ತದೆ.

ಮಹಿಳೆಯನ್ನು ಶತಮಾನಗಳಿಂದ ಭೂಮಿ, ಮನೆ, ಹೊಲ-ಗದ್ದೆಗಳ ಸ್ಥಿರಾಸ್ತಿಯಿಂದ ವಂಚಿಸುತ್ತಾ ಬಂದಿರುವುದು, ಸಮಾನ ಆಸ್ತಿಹಕ್ಕು ದೊರೆಯದಿರುವುದು, ಮಹಿಳೆಗೆ ಸಂಬಂಧಿಸಿದ ಹಲವಾರು ಪರಂಪರಾಗತ ಮೂಢನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಮುಂದುವರಿದಿರುವುದು, ರಾಜಕೀಯದಲ್ಲಿ ಸಮಾನ ಅವಕಾಶಗಳು ದೊರೆಯದಿರುವುದು, ದೇಶದ ಪ್ರಗತಿಯ ನೀತಿ-ನಿಯಮಾವಳಿಗಳನ್ನು ರೂಪಿಸುವಲ್ಲಿ ಹೆಣ್ಣನ್ನು ಸಮಾನವಾಗಿ ಒಳಗೊಳ್ಳದಿರುವುದು, ಇಂದಿಗೂ ಮನೆಯ ಹೆಚ್ಚಿನ ಜವಾಬ್ದಾರಿ ಮಹಿಳೆಯದೇ ಆಗಿರುವುದು, ಸಾಮಾಜಿಕ ತೊಡಗುವಿಕೆಗಿಂತ ಕೌಟುಂಬಿಕ ಹಿತವನ್ನೇ ಪರಮೋಚ್ಚವಾಗಿ ಪರಿಗಣಿಸಬೇಕೆಂದು ನಿರ್ಧರಿಸಿರುವ ನಮ್ಮ ಕೌಟುಂಬಿಕ ಮೌಲ್ಯಗಳು, ಹೆಣ್ಣಿನ ಸುರಕ್ಷತೆಗೆ ಬೇಕಾದ ಸಮರ್ಪಕ ವ್ಯವಸ್ಥೆಗಳಿಲ್ಲದಿರುವುದು......

ಹೀಗೆ....ಇವೆಲ್ಲವೂ ಸಮಾಜದ ಒಟ್ಟು ಅಭಿವೃದ್ಧಿ ಪರಿಕಲ್ಪನೆಯಿಂದ ಹೆಣ್ಣುಮಕ್ಕಳು ದೂರವೇ ಉಳಿಯುವಂತೆ ಮಾಡಿವೆ ಮತ್ತು ಅವಳ ಸಂಕಟದ ಮೂಲಗಳೂ ಇವೇ ಆಗಿವೆ! ಇನ್ನಾದರೂ ಪ್ರತಿಯೊಬ್ಬ ಹೆಣ್ಣುಮಗಳು ತನ್ನ ಹಕ್ಕನ್ನು ಪ್ರಶ್ನಿಸಿ ಪಡೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಉಳಿಗಾಲವಿಲ್ಲ. ಅದಕ್ಕಾಗಿ ಇಂದು ‘‘ಭವಿಷ್ಯದ ಹೆಣ್ಣುಮಕ್ಕಳ ಸಮಾನತೆಗಾಗಿ -ನನ್ನ ದನಿ’’ ದಿಟ್ಟವಾಗಿ ಎಲ್ಲೆಡೆಯಿಂದ ಮೊಳಗಬೇಕಿದೆ.

Writer - ರೂಪ ಹಾಸನ

contributor

Editor - ರೂಪ ಹಾಸನ

contributor

Similar News