ಆರ್ಮೇನಿಯ, ಅಝರ್‌ಬೈಜಾನ್ ನಡುವೆ ಮತ್ತೇ ಸಂಘರ್ಷ ಸ್ಫೋಟ

Update: 2020-10-11 16:56 GMT
ಸಾಂದರ್ಭಿಕ ಚಿತ್ರ

ಮಾಸ್ಕೋ (ರಶ್ಯ), ಅ. 11: ಯುದ್ಧವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ, ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳ ನಡುವೆ ಹೊಸದಾಗಿ ಸಂಘರ್ಷ ಸ್ಫೋಟಿಸಿದೆ.

ವಿವಾದಾಸ್ಪದ ವಲಯ ನಗೋರ್ನೊ-ಕರಬಾಖ್‌ನ ರಾಜಧಾನಿ ಸ್ಟೆಪನಕರ್ಟ್‌ನಲ್ಲಿ ಶನಿವಾರ ಸಂಜೆ ಹಲವು ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಮತ್ತು ಆರ್ಮೇನಿಯನ್ ಮಾಧ್ಯಮಗಳು ವರದಿ ಮಾಡಿವೆ.

ಎದುರಾಳಿಯು ಬಾಂಬ್ ದಾಳಿಗಳನ್ನು ಮುಂದುವರಿಸಿದೆ ಎಂಬುದಾಗಿ ಉಭಯ ದೇಶಗಳೂ ಆರೋಪಿಸಿವೆ.

ರಶ್ಯ ರಾಜಧಾನಿ ಮಾಸ್ಕೋದಲ್ಲಿ ರಶ್ಯ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ನಡೆದ ಮಾತುಕತೆಯ ವೇಳೆ, ಉಭಯ ದೇಶಗಳ ನಾಯಕರು ಎರಡು ವಾರಗಳ ಯುದ್ಧಕ್ಕೆ ತಾತ್ಕಾಲಿಕ ವಿರಾಮ ನೀಡಲು ಒಪ್ಪಿಗೆ ನೀಡಿದ್ದರು. ಹಾಗಾಗಿ, ಶನಿವಾರ ಮಧ್ಯಾಹ್ನ ಯುದ್ಧವಿರಾಮ ಜಾರಿಗೆ ಬಂತು.

ರವಿವಾರ ಪರಿಸ್ಥಿತಿ ‘‘ನಿನ್ನೆಗಿಂತಗ ಶಾಂತವಾಗಿದೆ’’ ಎಂಬುದಾಗಿ ನಗೋರ್ನೊ-ಕರಬಾಖ್ ವಲಯದ ನಾಯಕರೊಬ್ಬರು ಹೇಳಿದ್ದಾರೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ, ಯುದ್ಧವಿರಾಮವು ಅಸ್ಥಿರವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

ರಾತ್ರಿಯಿಡೀ ದಾಳಿ: 9 ಸಾವು

ಅಝರ್‌ಬೈಜಾನ್‌ನ ಎರಡನೇ ಅತಿ ದೊಡ್ಡ ನಗರ ಗಂಜದ ಮೇಲೆ ಶನಿವಾರ ರಾತ್ರಿಯಿಡೀ ಆರ್ಮೇನಿಯ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ಅಝರ್‌ಬೈಜಾನ್‌ನ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಹೇಳಿದೆ.

ಗಂಜವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿಲ್ಲ ಎಂದು ಆರ್ಮೇನಿಯ ಹೇಳಿದೆ ಹಾಗೂ ಯುದ್ಧವಿರಾಮದ ಶರತ್ತುಗಳನ್ನು ಉಲ್ಲಂಘಿಸಿ ನಗೋರ್ನೊ-ಕರಬಾಖ್ ರಾಜಧಾನಿ ಸ್ಟೆಪನಕರ್ಟ್ ಮತ್ತು ಇತರ ಪಟ್ಟಣಗಳನ್ನು ಗುರಿಯಾಗಿಸಿ ಅಝರ್‌ ಬೈಜಾನ್ ಪಡೆಗಳು ದಾಳಿ ನಡೆಸುತ್ತಿವೆ ಎಂದು ಅದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News