ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯವರೆಗೆ ಹೋರಾಟ: ಮುನೀರ್ ಕಾಟಿಪಳ್ಳ

Update: 2020-10-12 07:42 GMT

ಮಂಗಳೂರು, ಅ.12: ಖಾಸಗಿ ಎಂಟು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸರಕಾರಿ ಕಾಲೇಜು ಸ್ಥಾಪನೆ ಮಾಡಲು ಆಗದಿರುವುದು ರಾಜಕಾರಣದ ಸೋಲು ಮಾತ್ರವಲ್ಲ, ಜನಸಾಮಾನ್ಯರ ಪ್ರಜ್ಞೆಯ ಸೋಲು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಸಮಾಧಾ ವ್ಯಕ್ತಪಡಿಸಿದರು.

ಜನಪರ ಹಾಗೂ ಸಮಾನ ಮನಸ್ಕ ಸಂಘಟನೆಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ನೇತೃತ್ವದ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ವತಿಯಿಂದ ಆಯೋಜಿಸಲಾಗಿರುವ ಖಾಸಗಿ ಆಸ್ಪತ್ರೆ ನಿಯಂತ್ರಿಸಿ, ಸರಕಾರಿ ಆಸ್ಪತ್ರೆ ಉಳಿಸಿ ಎಂಬ ಸಾಮೂಹಿಕ ಧರಣಿಯ ಉದ್ಘಾಟನೆಯನ್ನು ಲಾಲ್‌ಬಾಗ್‌ನ ಮಹಾನಗರ ಪಾಲಿಕೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಕಚೇರಿ ಎದುರು ಇಂದು ನೆರವೇರಿಸಿ ಅವರು ಮಾತನಾಡಿದರು.

ಕೋವಿಡ್‌ನ ಅಪಾಯದ ಬಗ್ಗೆ ನಮಗೆಲ್ಲಾ ಪ್ರಜ್ಞೆ ಇದೆ. ಆದರೆ ಸರಕಾರ ಜನಸಾಮಾನ್ಯರಿಗೆ ಉಚಿತ ಆರೋಗ್ಯ ಸೇವೆಯನ್ನು ನೀಡಬೇಕಾದ ಸಮಯದಲ್ಲಿ ಕೋವಿಡ್ ನೆಪವನ್ನು ಬಳಸಿ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವಲ್ಲಿ ನಿರತವಾಗಿದೆ. ಖಾಸಗಿ ಆಸ್ಪತ್ರೆಗಳ ವ್ಯಾಪಾರೀಕರಣದಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಇಂತಹ ಸಮಯದಲ್ಲಿ ದ.ಕ. ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಬೇಡಿಕೆಯೊಂದಿಗೆ ಆರಂಭಗೊಂಡಿರುವ ಈ ಹೋರಾಟ ಶಾಸಕರ ಕಚೇರಿ ಮುಂದೆ ಮಾತ್ರವಲ್ಲದೆ ಹೋಬಳಿ ಗ್ರಾಮ ಮಟ್ಟದಲ್ಲಿಯೂ ಆಂದೋಲನ ರೀತಿಯಲ್ಲಿ ನಡೆಸಲಾಗುವುದು. ರಾಜಕೀಯ ರಹಿತವಾಗಿ ಸಾಮೂಹಿಕ ನಾಯಕತ್ವದಲ್ಲಿ ಈ ಹೋರಾಟ ನಡೆಯಲಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಹಿರಿಯ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ದಿನೇಶ್ ಹೆಗ್ಡೆ ಉಳೇಪಾಡಿ ಮಾತನಾಡಿ, ಶಾಸಕರು, ಜನಪ್ರತಿನಿಧಿಗಳಿಗೆ ಕೊರೋನ ಸೇರಿದಂತೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದರೆ ಅದನ್ನು ಸರಕಾರ ಭರಿಸುತ್ತದೆ. ಆದರೆ, ಜನಸಾಮಾನ್ಯರಿಗೆ ಈ ವ್ಯವಸ್ಥೆ ಯಾಕಿಲ್ಲ ಎಂದವರು ಪ್ರಶ್ನಿಸಿದರು.

ದಲಿತ ಸಂಘರ್ಷ ಸಮಿತಿಯ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಮುಖಂಡರಾದ ದೇವದಾಸ್ ಮಾತನಾಡಿ, ಅಂದು ಬ್ರಿಟಿಷರು ಜನರ ಆರೋಗ್ಯ, ಶಿಕ್ಷಣದ ಬಗ್ಗೆ ತೋರಿದ ಕಾಳಜಿ ಇಂದು ನಮ್ಮವರೇ ಆದ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ದುರಾದೃಷ್ಟಕರ. ಕೊರೋನದಂತಹ ಈ ಸಂದರ್ಭದಲ್ಲಿ ಬಡವರ ಆರೋಗ್ಯ ಬೀದಿ ಪಾಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮೂಹಿಕ ಧರಣಿಯಲ್ಲಿ ವಿ. ಕುಕ್ಯಾನ್, ಜೆ. ಬಾಲಕೃಷ್ಣ ಶೆಟ್ಟಿ, ಶೋಭಾ ಕೇಶವ, ತಿಮ್ಮಪ್ಪ ಕೊಂಚಾಡಿ, ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಶಶಿಕಲಾ ಯೆಯ್ಯಿಡಿ, ಯಶವಂತ ಮರೋಳಿ, ಮೈಕಲ್ ಡಿಸೋಜಾ, ದಿನೇಶ್ ಕುಂಪಲ, ವೆಂಕಟೇಶ್, ಯೋಗಿತಾ, ಸುರೇಶ್ ಶೆಟ್ಟಿ, ಫಾರೂಕ್ ಉಳ್ಳಾಲ್, ಮುಹಮ್ಮದ್, ಸೀತಾರಾಮ ಬೇರಿಂಜ, ಕರುಣಾಕರ, ವಾಸುದೇವ ಉಚ್ಚಿಲ್, ದಯಾನಂದ ಶೆಟ್ಟಿ, ಅಲಿಹಸನ್, ಪ್ರಭಾಕರ ರಾವ್, ಪ್ರಮೀಳಾ ದೇವಾಡಿಗ ಸೇರಿದಂತೆ ವಿವಿಧ ಸಂಘಟನೆ, ಪಕ್ಷಳು ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಸಂತೋಷ್ ಕುಮಾರ್ ಬಜಾಲ್ ಸಾಮೂಹಿಕ ಧರಣಿಯಲ್ಲಿ ಸ್ವಾಗತಿಸಿ, ನಿರೂಪಿಸಿದರು.

''ಬುದ್ಧಿವಂತರ ಜಿಲ್ಲೆಯೆಂದು ಕರೆಸಿಕೊಳ್ಳುವ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ದ.ಕ. ಜಿಲ್ಲೆಯಲ್ಲಿ ಸುಸಜ್ಜಿತ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಇಲ್ಲದಿರುವುದು ಸರಕಾರದ ಅವ್ಯವಸ್ಥೆ. ಶ್ರೀನಿವಾಸ ಮಲ್ಯರಂತಹ ರಾಜಕೀಯ ಇಚ್ಛಾಶಕ್ತಿಯ ನಾಯಕರು ನಮ್ಮ ಜತೆಗಿಲ್ಲದಿರುವುದು ನಮ್ಮ ದೌರ್ಬಲ್ಯ. ನಮ್ಮ ಸಂಸದರು ಮನಸ್ಸು ಮಾಡಿದ್ದರೆ ನಂ. 1 ಮೆಡಿಕಲ್ ಕಾಲೇಜು ಜಿಲ್ಲೆಯಲ್ಲಿ ಸ್ಥಾಪಿಸಬಹುದಿತ್ತು. ವೆನ್‌ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಕೇಂದ್ರವಾಗಿ (ರೀಜಿನಲ್ ಸೆಂಟರ್) ಮಾಡುವಲ್ಲಿ ವಿಫಲವಾಗಿರುವುದಕ್ಕೆ ರಾಜಕೀಯ ಇಚ್ಛಾಸಕ್ತಿಯ ಕೊರತೆಯೇ ಕಾರಣ. ವೆನ್‌ಲಾಕ್ ಸರಕಾರಿ ಮೆಡಿಕಲ್ ಕಾಲೇಜು ಆಗಿ ಪರಿವರ್ತನೆಯಾದಲ್ಲಿ ನಾನು ನನ್ನ ವೈಯಕ್ತಿಕವಾಗಿ 10 ಡಯಾಲಿಸಿಸ್ ಯಂತ್ರ ಮಾತ್ರವಲ್ಲದೆ, ಹೊರ ದೇಶಗಳ ದಾನಿಗಳ ಮೂಲಕ 500 ಡಯಾಲಿಸಿಸ್ ಯಂತ್ರಗಳನ್ನು ಒದಗಿಸಲು ಸಿದ್ಧನಿದ್ದೇನೆ.''

- ಡಾ. ದೇವಿದಾಸ್ ಶೆಟ್ಟಿ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News