ಉ.ಪ್ರ. ನಾಗರಿಕ ಸೇವಾ ಪರೀಕ್ಷೆ ನಡೆಯುತ್ತಿದ್ದ ಕಾಲೇಜಿನಲ್ಲಿ ಅಪ್ರಾಪ್ತೆಯ ಅತ್ಯಾಚಾರ: 8 ವಿದ್ಯಾರ್ಥಿಗಳ ಬಂಧನ
ಲಕ್ನೋ : ರವಿವಾರ ಝಾನ್ಸಿ ಕಾಲೇಜೊಂದರಲ್ಲಿ ಉತ್ತರ ಪ್ರದೇಶ ಪ್ರೊವಿನ್ಶಿಯಲ್ ಸಿವಿಲ್ ಸರ್ವಿಸ್ ಪ್ರಿಲಿಮಿನರಿ ಪರೀಕ್ಷೆಗಳು ನಡೆಯುತ್ತಿದ್ದಂತೆಯೇ ಅತ್ತ ಕ್ಯಾಂಪಸ್ಸಿನಲ್ಲಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ.
ಕಾಲೇಜಿನ ಸುಮಾರು ಒಂದು ಡಜನ್ ವಿದ್ಯಾರ್ಥಿಗಳು ತನ್ನನ್ನು ಕ್ಯಾಂಪಸ್‍ನೊಳಗೆ ಬಲವಂತವಾಗಿ ಕರೆದುಕೊಂಡು ಹೋಗಿ ಅಲ್ಲಿ ಅವರಲ್ಲೊಬ್ಬ ತನ್ನ ಮೇಲೆ ಅತ್ಯಾಚಾರವೆಸಗಿದ್ದು, ಇತರರು ವೀಡಿಯೋ ಚಿತ್ರೀಕರಣ ನಡೆಸಿದ್ದಾರೆ ಹಾಗು ತನ್ನಲ್ಲಿದ್ದ ರೂ. 2,000 ಹಣ ಲಪಟಾಯಿಸಿದ್ದಾರೆಂದು ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ. ಅಷ್ಟೇ ಅಲ್ಲದೆ ತಾನು ಭೇಟಿಯಾಗಲೆಂದು ಬಂದ ಹುಡುಗನಿಗೆ ಅವರೆಲ್ಲರೂ ಥಳಿಸಿದ್ದಾರೆ ಎಂದೂ ಆರೋಪಿಸಿರುವ ಸಂತ್ರಸ್ತೆ ಘಟನೆ ಕುರಿತು ಯಾರಲ್ಲಾದರೂ ಬಾಯ್ಬಿಟ್ಟರೆ ವೀಡಿಯೋ ವೈರಲ್ ಮಾಡುವುದಾಗಿಯೂ ಬೆದರಿಸಿದ್ದಾರೆ ಎಂದು ದೂರಿದ್ದಾಳೆ.
ಘಟನೆ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳಾದ ರೋಹಿತ್ ಸೈನಿ ಹಾಗೂ ಭರತ್ ಕುಶ್ವಾಹ ಸೇರಿದಂತೆ ಎಂಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಝಾನ್ಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಪಿ ಹೇಳಿದ್ದಾರೆ.
ಸಂತ್ರಸ್ತೆ ಕ್ಯಾಂಪಸ್ಸಿನೊಳಗೆ ಹೇಗೆ ಬಂದಳೆಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ಭದ್ರತಾ ಸಿಬ್ಬಂದಿ ಇಲ್ಲದ ಗೇಟಿನ ಮೂಲಕ ತನ್ನನ್ನು ಬಲವಂತವಾಗಿ ಕರೆದೊಯ್ಯಲಾಯಿತು ಎಂದು ಆಕೆ ಹೇಳಿದ್ದಾಳೆ. ಈ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಒಬ್ಬ ಭದ್ರಾ ಸಿಬ್ಬಂದಿ ಮಾತ್ರವಿದ್ದು ಪರೀಕ್ಷೆ ಸಂಬಂಧಿತ ಭದ್ರತಾ ಕೆಲಸದಲ್ಲಿ ಆತ ನಿರತನಾಗಿದ್ದನೆನ್ನಲಾಗಿದೆ.
ಕೆಲ ಪೊಲೀಸ್ ಸಿಬ್ಬಂದಿಗೆ ಹುಡುಗಿ ಬೊಬ್ಬಿಡುತ್ತಿರುವ ದನಿ ಕೇಳಿ ಆಕೆಯನ್ನು ರಕ್ಷಿಸಿ ಆಕೆಯನ್ನು ಠಾಣೆಗೆ ಕರೆದುಕೊಂಡು ಹೋದ ಸಂದರ್ಭ ಆಕೆ ಘಟನೆಯ ಕುರಿತು ವಿವರಿಸಿದ್ದಳು. ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಘಟನೆಯ ಕುರಿತು ಆದಷ್ಟು ಬೇಗ ಚಾರ್ಜ್ ಶೀಟ್ ಸಲ್ಲಿಸಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂಚನೆ ನೀಡಿದ್ದಾರೆ.
ಆರೋಪಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.