ತೆರೆಯದ ಶಾಲೆಗಳು: ಭಾರತದಲ್ಲಿ 29.32 ಲಕ್ಷ ಕೋಟಿ ರೂ. ಆದಾಯ ನಷ್ಟ; ವಿಶ್ವಬ್ಯಾಂಕ್ ವರದಿ ಎಚ್ಚರಿಕೆ

Update: 2020-10-12 15:31 GMT
ಸಾಂದರ್ಭಿಕ ಚಿತ್ರ

 ನ್ಯೂಯಾರ್ಕ್, ಅ. 12: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಭಾರತದಲ್ಲಿ ಸುದೀರ್ಘ ಅವಧಿಗೆ ಶಾಲೆಗಳ ಮುಚ್ಚುಗಡೆಯಿಂದಾಗಿ ದೇಶದ ಭವಿಷ್ಯದ ಗಳಿಕೆಯಲ್ಲಿ 400 ಬಿಲಿಯ ಡಾಲರ್ (ಸುಮಾರು 29.32 ಲಕ್ಷ ಕೋಟಿ ರೂಪಾಯಿ)ನಷ್ಟು ನಷ್ಟ ಉಂಟಾಗಬಹುದು ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ಹೇಳಿದೆ.

 ಹಾಲಿ ಪರಿಸ್ಥಿತಿಯಲ್ಲಿ, ಶಾಲೆಗಳ ಮುಚ್ಚುಗಡೆಯಿಂದಾಗಿ ದಕ್ಷಿಣ ಏಶ್ಯವು 622 ಬಿಲಿಯ ಡಾಲರ್ (ಸುಮಾರು 45.60 ಲಕ್ಷ ಕೋಟಿ ರೂಪಾಯಿ) ವರಮಾನ ಕಳೆದುಕೊಳ್ಳಲಿದೆ. ಆದರೆ, ಪರಿಸ್ಥಿತಿ ಬಿಗಡಾಯಿಸಿದರೆ ವರಮಾನ ನಷ್ಟದ ಪ್ರಮಾಣ 880 ಬಿಲಿಯ ಡಾಲರ್ (ಸುಮಾರು 64.51 ಲಕ್ಷ ಕೋಟಿ ರೂಪಾಯಿ)ಗೆ ಹೆಚ್ಚಬಹುದು ಎಂದು ‘ಬೀಟನ್ ಆರ್ ಬ್ರೋಕನ್? ಇನ್‌ಫಾರ್ಮಾಲಿಟಿ ಆ್ಯಂಡ್ ಕೋವಿಡ್-19 ಇನ್ ಸೌತ್ ಏಶ್ಯ’ ಎಂಬ ಶೀರ್ಷಿಕೆಯ ವರದಿ ತಿಳಿಸಿದೆ.

ದಕ್ಷಿಣ ಏಶ್ಯದ ಆರ್ಥಿಕತೆಯ ಮೇಲೆ ಕೋವಿಡ್-19ರ ವಿನಾಶಕಾರಿ ಪರಿಣಾಮಗಳ ಹಿನ್ನೆಲೆಯಲ್ಲಿ, ಈ ವಲಯವು 2020ರಲ್ಲಿ ಹಿಂದೆಂದೂ ಕಂಡರಿಯದ ಆರ್ಥಿಕ ಕುಸಿತಕ್ಕೆ ಒಳಗಾಗಲಿದೆ ಎಂದು ವರದಿ ಭವಿಷ್ಯ ಹೇಳಿದೆ.

‘‘ದಕ್ಷಿಣ ಏಶ್ಯದ ಎಲ್ಲ ದೇಶಗಳಲ್ಲಿ ಶಾಲೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಿರುವುದು ವಿದ್ಯಾರ್ಥಿಗಳ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ಇದರಿಂದಾಗಿ ಪ್ರಾಥಮಿಕ ಮತ್ತು ಹೈಸ್ಕೂಲ್ ಮಟ್ಟಗಳ 39.1 ಕೋಟಿ ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿದಿದ್ದಾರೆ. ಶೈಕ್ಷಣಿಕ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಇದು ದೊಡ್ಡ ಹೊಡೆತವಾಗಿದೆ’’ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News