ದ.ಕ. ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭಿಸದಿದ್ದರೆ ಉಗ್ರ ಹೋರಾಟ: ವರುಣ್ ಕುಮಾರ್

Update: 2020-10-13 07:24 GMT

ಮಂಗಳೂರು, ಅ.13: ನದಿ, ಸಮುದ್ರದಿಂದ ಆವೃತವಾಗಿರುವ ದ.ಕ. ಜಿಲ್ಲೆಯಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ಮರಳಿನ ಸಮಸ್ಯೆಯಿಂದಾಗಿ ಕಟ್ಟಡ ಕಾರ್ಮಿಕರ ಜೀವನ ಅತಂತ್ರವಾಗಿದೆ. ತಕ್ಷಣ ಮರಳುಗಾರಿಕೆಯನ್ನು ಆರಂಭಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಇಂಟೆಕ್‌ನ ಯುವ ಘಟಕದ ರಾಜ್ಯಾಧ್ಯಕ್ಷ ವರುಣ್ ಕುಮಾರ್ ಎಸ್.ಕೆ. ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 6000 ರೂ. ವೌಲ್ಯದ ಮರಳನ್ನು 20,000 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಕ್ರಮ ಮರಳುಗಾರಿಕೆಯಿಂದ ಬಡಜನರು ಮನೆ ಕಟ್ಟಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಮರಳಿನ ಅಭಾವದಿಂದ ಮರಳು ಸಾಗಾಟಗಾರರು, ಕಾರ್ಮಿಕರು ಮಾತ್ರವಲ್ಲದೆ, ಇಂಜಿನಿಯರ್‌ಗಳು, ಬಿಲ್ಡರ್‌ಗಳು ಹಾಗೂ ಕಟ್ಟಡ ಕಾಮಗಾರಿಯನ್ನು ಅವಲಂಬಿಸಿರುವ ಇತರ ಕ್ಷೇತ್ರದ ಕಾರ್ಮಿಕರೂ ಸಂಕಷ್ಟ ಎದುರಿಸುವಂತಾಗಿದೆ. ಮರಳುಗಾರಿಕೆಗೆ ಅವಕಾಶ ನೀಡದೆ ಜಿಲ್ಲಾಡಳಿತ, ಗಣಿ ಇಲಾಖೆ ಹಾಗೂ 2000 ರೂ. ದರದಲ್ಲಿ ಮರಳು ನೀಡುವುದಾಗಿ ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷರು ಕೂಡಾ ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಅ.14ರಿಂದ ಬಿಲ್ಡರ್ಸ್ ಅಸೋಸಿಯೇಶನ್ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಗುತ್ತಿಗೆದಾರರು, ಅಸೋಸಿಯೇಶನ್‌ನವರು ನಡೆಸಲು ಉದ್ದೇಶಿಸಿರುವ ಹೋರಾಟಕ್ಕೆ ಇಂಟೆಕ್ ಸಂಪೂರ್ಣ ಬೆಂಬಲ ನೀಡುತ್ತಿರುವುದಾಗಿ ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಮಾತನಾಡಿ, ಕಳೆದ ಸುಮಾರು ಒಂದು ವರ್ಷಗಳಿಂದ ಸಿಆರ್‌ಝೆಡ್ ಹಾಗೂ ಸಿಆರ್‌ಝೆಡೇತರ ಮರಳು ದಿಬ್ಬಗಳಲ್ಲಿ ಮರಳು ತೆಗೆಯಲು ಅನುಮತಿ ನೀಡುವಂತೆ ಕೋರಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ವಿವಿಧ ಅಸೋಸಿಯೇಶನ್‌ವರು ಮನವಿ ಸಲಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ, ಸಂಸದರು ವೌನವಾಗಿರುವ ಬಗ್ಗೆ ಅನುಮಾನ ಕಾಡುತ್ತಿದೆ ಎಂದು ಹೇಳಿದರು.

ಎಐಸಿಸಿ ಸದಸ್ಯೆ ಕವಿತಾ ಸನಿಲ್ ಪ್ರತಿಕ್ರಿಯಿಸಿ, ಹಿಂದಿನ ಆಡಳಿತದ ಅವಧಿಯಲ್ಲಿ ಸಚಿವರಾಗಿದ್ದ ಯು.ಟಿ.ಖಾದರ್, ರಮಾನಾಥ ರೈ ವಿರುದ್ಧ ಮರಳು ಮಾಫಿಯಾದ ಆರೋಪ ಹೊರಿಸುತ್ತಿದ್ದ ಬಿಜೆಪಿಯವರು ಇದೀಗ ಐದಾರು ಸಾವಿರ ರೂ.ಗೆ ಸಿಗುತ್ತಿದ್ದ ಮರಳು 20 000 ರೂ.ಗಳಿಗೆ ಮಾರಾಟವಾಗುತ್ತಿರುವ ಬಗ್ಗೆ ವೌನವಾಗಿದ್ದಾರೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಏನು ಮಾಡುತ್ತಿದ್ದಾರೆ. ಸಂಸದರು, ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಯೂತ್ ಇಂಟಕ್ ಜಿಲ್ಲಾಧ್ಯಕ್ಷ ಚಿರಂಜೀವಿ ಅಂಚನ್, ದಕ್ಷಿಣ ಅಧ್ಯಕ್ಷ ಪುನೀತ್ ಶೆಟ್ಟಿ, ಮಂಗಳೂರು ವಿಭಾಗದ ಅಧ್ಯಕ್ಷ ಸಿದ್ದೀಕ್ ಹಸನ್, ಉತ್ತರ ವಿಭಾಗದ ಅಧ್ಯಕ್ಷ ಸಂಪತ್ ಲೋಬೊ, ಬಂಟ್ವಾಳ ವಿಭಾಗ ಪದ್ಮಸ್ಮಿತ್ ಅಧಕಾರಿ, ಸುಳ್ಯದ ಅಧ್ಯಕ್ಷ ಅನಿಲ್ ಕುಮಾರ್, ಮಂಗಳೂರು ಇಂಟಕ್ ಅಧ್ಯಕ್ಷೆ ಹರೀಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News