ಬಾಕಿ ಪ್ರಕರಣಗಳ ಕುರಿತು ಮಾಧ್ಯಮಗಳಲ್ಲಿ ಚರ್ಚೆ ನಡೆಸುವುದು 'ಹಾನಿಕರ': ಸುಪ್ರೀಂಗೆ ತಿಳಿಸಿದ ಅಟಾರ್ನಿ ಜನರಲ್

Update: 2020-10-13 11:30 GMT

ಹೊಸದಿಲ್ಲಿ: ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ಕುರಿತಂತೆ ಟಿವಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳು ನ್ಯಾಯಾಧೀಶರುಗಳ ಚಿಂತನೆಗಳ ಮೇಲೆ ಪ್ರಭಾವ ಬೀರುವ ಹೊರತಾಗಿ ನ್ಯಾಯಾಂಗ ವ್ಯವಸ್ಥೆಗೆ ದೊಡ್ಡ ಹಾನಿಯುಂಟು ಮಾಡಬಹುದು ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಹೇಳಿದ್ದಾರೆ.

"ಈ ಸಮಸ್ಯೆ ಇಂದು  ಬಹಳ  ಹೆಚ್ಚಾಗಿ ಬಿಟ್ಟಿದೆ. ಜಾಮೀನು ಅರ್ಜಿ ವಿಚಾರಣೆಗೆ ಬರಬೇಕೆನ್ನುವಾಗ ಟಿವಿ ಮಾಧ್ಯಮಗಳಲ್ಲಿ ಆರೋಪಿ ಹಾಗೂ ಇತರರ ನಡುವೆ ಚರ್ಚೆಗಳನ್ನು ತೋರಿಸುತ್ತವೆ. ಇದು ಆರೋಪಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು, ಈ ರೀತಿ ಬಾಕಿ ಪ್ರಕರಣಗಳ ಕುರಿತು ಮಾಧ್ಯಮಗಳಲ್ಲಿ ಚರ್ಚೆ ನ್ಯಾಯಾಂಗ ನಿಂದನೆ,'' ಎಂದು ಸುಪ್ರೀಂ ಕೋರ್ಟ್ ಪೀಠದ ಮುಂದೆ ಇಂದು ವೇಣುಗೋಪಾಲ್ ಹೇಳಿದರು.

ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಇಂದು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು  ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್, ಬಿ ಆರ್ ಗವಾಯಿ, ಕೃಷ್ಣ ಮುರಾರಿ ಅವರ ಪೀಠದ ಮುಂದೆ ವ್ಯಕ್ತಪಡಿಸಿದರು. ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಮಾಧ್ಯಮಗಳಲ್ಲಿ ಚರ್ಚಿಸುವ ಕುರಿತು ಹಾಗೂ ನ್ಯಾಯಾಧೀಶರೊಬ್ಬರ ಮೇಲೆ ದೂರನ್ನು ಯಾವಾಗ ಹೇಗೆ ಯಾವ ಸನ್ನಿವೇಶಗಳಲ್ಲಿ ನೀಡಬಹುದು ಎಂಬುದರ ಕುರಿತು ವೇಣುಗೋಪಾಲ್ ಅವರ ಅಭಿಪ್ರಾಯಗಳನ್ನು ಆಲಿಸುತ್ತಿದ್ದಾಗ ಅವರು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News