12 ತಬ್ಲೀಗಿ ಸದಸ್ಯರನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ

Update: 2020-10-13 11:34 GMT

ಮುಂಬೈ : ಸರಕಾರದ ಆದೇಶಗಳನ್ನು ಧಿಕ್ಕರಿಸಿ ತಮ್ಮ ಅಜಾಗರೂಕತೆಯಿಂದಾಗಿ ಕೋವಿಡ್-19 ಹರಡುವಿಕೆಗೆ ಕಾರಣರಾಗಿದ್ದಾರೆ ಎಂಬ ಆರೋಪ ಹೊತ್ತಿದ್ದ ತಬ್ಲೀಗಿ ಜಮಾತ್ ಸದಸ್ಯರಾದ 12 ಮಂದಿ ಇಂಡೊನೇಷ್ಯಾ ಪ್ರಜೆಗಳ ವಿರುದ್ಧದ ಪ್ರಕರಣಗಳನ್ನು ವಜಾಗೊಳಿಸಿ ಬಾಂದ್ರಾದ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.

ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು  ಹೊರಿಸಿದ್ದ ಆರೋಪಗಳನ್ನು ಲಭ್ಯ ಸಾಕ್ಷ್ಯಗಳು ಸಾಬೀತು ಪಡಿಸಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ಜಯದಿಯೊ ವೈ ಘುಲೆ  ಅವರನ್ನು ಈ ಪ್ರಕರಣದಿಂದ ಮುಕ್ತಗೊಳಿಸಿದ್ದೇ ಅಲ್ಲದೆ ಅವರ ಪಾಸ್ಪೋರ್ಟುಗಳನ್ನು ವಾಪಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆರೋಪಿಗಳ ಜಾಮೀನು ಬಾಂಡ್‍ಗಳನ್ನೂ ನ್ಯಾಯಾಧೀಶರು ರದ್ದುಗೊಳಿಸಿದ್ದಾರೆ.

ಮೂವತ್ತೈದು ಇತರ ತಬ್ಲೀಗಿ ಜಮಾತ್ ಸದಸ್ಯರ ವಿರುದ್ಧದ ಎಫ್‍ಐಆರ್ ರದ್ದುಗೊಳಿಸಿ ಬಾಂಬೆ ಹೈಕೋರ್ಟ್ ನ ಔರಂಗಾಬಾದ್  ಪೀಠ ಇತ್ತೀಚೆಗೆ ಹೊರಡಿಸಿದ್ದ ಆದೇಶವನ್ನು ಆಧಾರವಾಗಿಟ್ಟುಗೊಡು ನ್ಯಾಯಾಲಯ ಮೇಲಿನ ತೀರ್ಪು ನೀಡಿದೆ.

ಆರೋಪಿಗಳ ಬಳಿಯಿರುವ ವೀಸಾ ಕೂಡ ಕಾನೂನುಬದ್ಧವಾಗಿದ್ದು ಈ ನಿಟ್ಟಿನಲ್ಲಿಯೂ ಅವರು ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಆರೋಪಿಗಳು ಫೋರ್ಜರಿ ಪಾಸ್‍ಪೋರ್ಟ್ ಮತ್ತು ವೀಸಾ ಬಳಸಿ ಭಾರತಕ್ಕೆ ಆಗಮಿಸಿದ್ದರು ಎಂಬ ಆರೋಪ ಅವರ ಮೇಲೆ ಈ ಹಿಂದೆ ಹೊರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News