ಕೊರೋನ ವೈರಸ್‌ನ 2ನೇ ಸೋಂಕಿನ ಪರಿಣಾಮ ಹೆಚ್ಚು ಕಠಿಣ
ಪ್ಯಾರಿಸ್ (ಫ್ರಾನ್ಸ್), ಅ. 13: ಒಮ್ಮೆ ಕೊರೋನ ವೈರಸ್ ಸೋಂಕಿಗೆ ಒಳಗಾದವರು ಎರಡನೇ ಬಾರಿ ಸೋಂಕಿಗೆ ಒಳಗಾದರೆ ಹೆಚ್ಚು ತೀವ್ರ ರೋಗ ಲಕ್ಷಣಗಳನ್ನು ಹೊಂದುತ್ತಾರೆ ಎಂದು ಮಂಗಳವಾರ ಬಿಡುಗಡೆಗೊಂಡ ಅಧ್ಯಯನ ವರದಿಯೊಂದು ತಿಳಿಸಿದೆ. ಜನರು ಒಂದಕ್ಕಿಂತ ಹೆಚ್ಚು ಬಾರಿ ಕೊರೋನ ವೈರಸ್ ದಾಳಿಗೆ ಒಳಗಾಗುವುದು ಸಾಧ್ಯ ಎಂದು ಸಂಶೋಧನೆ ಹೇಳಿದೆ.
ಅವೆುರಿಕದಲ್ಲಿ ಸಂಭವಿಸಿದ ಕೊರೋನ ವೈರಸ್ ಮರು ಸೋಂಕು ಪ್ರಕರಣವನ್ನು ‘ದ ಲ್ಯಾನ್ಸೆಟ್ ಇನ್‌ಫೆಕ್ಶಿಯಸ್ ಡಿಸೀಸಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯು ಪ್ರಸ್ತಾಪಿಸಿದೆ. ಒಮ್ಮೆ ಕೊರೋನ ವೈರಸ್ ಸೋಂಕಿಗೆ ಒಳಗಾದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಸೃಷ್ಟಿಯಾಗಿ ಭವಿಷ್ಯದಲ್ಲಿ ಈ ಕಾಯಿಲೆ ಬರುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತರಿ ಇಲ್ಲ ಎಂದು ಅದು ಹೇಳಿದೆ.
ವರದಿಯಲ್ಲಿ ಉಲ್ಲೇಖಿಸಲಾದ ರೋಗಿ, 25 ವರ್ಷದ ಅಮೆರಿಕದ ನೆವಾಡ ನಿವಾಸಿಯು 48 ದಿನಗಳ ಅವಧಿಯಲ್ಲಿ ಎರಡು ಬಾರಿ ಎರಡು ವಿಭಿನ್ನ ಕೊರೋನ ವೈರಸ್ ಮಾದರಿಗಳ ಸೋಂಕಿಗೆ ಗುರಿಯಾಗಿದ್ದಾರೆ.
ಎರಡನೇ ಸೋಂಕು ಮೊದಲನೆಯದಕ್ಕಿಂತ ಹೆಚ್ಚು ತೀವ್ರವಾಗಿತ್ತು. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಕೃತಕವಾಗಿ ಆಮ್ಲಜನಕವನ್ನು ಪೂರೈಸಲಾಗಿತ್ತು.