ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಗೆ ಮುಂಬೈ ಪೊಲೀಸರ ಶೋಕಾಸ್ ನೋಟಿಸ್

Update: 2020-10-13 17:12 GMT

ಮುಂಬೈ,ಅ.13: ಸಿಪಿಸಿಯ ಕಲಂ 108ರಡಿ ನಿಮ್ಮ ವಿರುದ್ಧ ‘ಚಾಪ್ಟರ್ ಪ್ರೊಸೀಡಿಂಗ್’ ಅನ್ನು ಏಕೆ ಆರಂಭಿಸಬಾರದು ಎಂದು ಕೇಳಿ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಶೋಕಾಸ್ ನೋಟಿಸ್‌ನ್ನು ಹೊರಡಿಸಿದ್ದಾರೆ. ಚಾಪ್ಟರ್ ಪ್ರೊಸೀಡಿಂಗ್‌ನಡಿ ಪೊಲೀಸರು ಯಾವುದೇ ನಾಗರಿಕನಿಂದ ಮೂರು ವರ್ಷಗಳವರೆಗೆ ಸದ್ವರ್ತನೆಯ ಬಾಂಡ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಅ.16ರಂದು ತನ್ನೆದುರು ಹಾಜರಾಗುವಂತೆ ಎಸಿಪಿ(ವರ್ಲಿ ವಿಭಾಗ) ಸುಧೀರ್ ಜಾಂಬವಾಡೇಕರ್ ಅವರು ನೋಟಿಸಿನಲ್ಲಿ ಗೋಸ್ವಾಮಿಗೆ ಸೂಚಿಸಿದ್ದಾರೆ.

ಮಹಾರಾಷ್ಟ್ರ ಪಾಲ್ಘರ್ ಜಿಲ್ಲೆಯಲ್ಲಿ ಗುಂಪಿನಿಂದ ಸಾಧುಗಳ ಹತ್ಯೆ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ಬಾಂದ್ರಾದಲ್ಲಿ ವಲಸೆ ಕಾರ್ಮಿಕರ ಜಮಾವಣೆ ಇವೆರಡು ಘಟನೆಗಳ ಆಕ್ಷೇಪಾರ್ಹ ಸುದ್ದಿಪ್ರಸಾರವನ್ನು ನೋಟಿಸಿನಲ್ಲಿ ಪ್ರಸ್ತಾವಿಸಲಾಗಿದೆ. ಗೋಸ್ವಾಮಿ ಮತ್ತು ಅವರ ವಾಹಿನಿಯು ಘಟನೆಗಳಿಗೆ ಕೋಮುಬಣ್ಣ ನೀಡಿದ್ದವು ಹಾಗೂ ಹಿಂದು ಮತ್ತು ಮುಸ್ಲಿಮರ ನಡುವೆ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸಿದ್ದವು ಎಂದೂ ನೋಟಿಸಿನಲ್ಲಿ ಹೇಳಲಾಗಿದೆ.

ಗೋಸ್ವಾಮಿ ವಿರುದ್ಧ ಈಗಾಗಲೇ ಮುಂಬೈನ ಎನ್‌ಎಂ ಜೋಶಿ ಮಾರ್ಗ ಮತ್ತು ಪೈಧೋನಿ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಇಂತಹುದೇ ಆರೋಪಗಳನ್ನು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News