ಜಿಎಸ್‌ಟಿ ಕೊರತೆ: 68,825 ಕೋ.ರೂ.ಗಳ ಸಾಲವೆತ್ತಲು 20 ರಾಜ್ಯಗಳಿಗೆ ಕೇಂದ್ರದ ಒಪ್ಪಿಗೆ

Update: 2020-10-13 17:16 GMT

ಹೊಸದಿಲ್ಲಿ,ಅ.13: ಜಿಎಸ್‌ಟಿ ಆದಾಯ ಕೊರತೆಯನ್ನು ತುಂಬಿಕೊಳ್ಳಲು ಮುಕ್ತ ಮಾರುಕಟ್ಟೆ ಸಾಲಗಳ ಮೂಲಕ 68,825 ಕೋ.ರೂ.ಗಳನ್ನು ಸಂಗ್ರಹಿಸಲು 20 ರಾಜ್ಯಗಳಿಗೆ ಕೇಂದ್ರವು ಮಂಗಳವಾರ ಅನುಮತಿ ನೀಡಿದೆ.

ಸೋಮವಾರ ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯು ಕೊರತೆಯನ್ನು ನೀಗಿಕೊಳ್ಳಲು ಭವಿಷ್ಯದ ಜಿಎಸ್‌ಟಿ ಸಂಗ್ರಹಗಳ ಆಧಾರದಲ್ಲಿ ಸಾಲವೆತ್ತುವಂತೆ ರಾಜ್ಯಗಳಿಗೆ ಕೇಂದ್ರದ ಪ್ರಸ್ತಾವದ ಕುರಿತು ಬಿಕ್ಕಟ್ಟನ್ನು ಬಗೆಹರಿಸಲು ವಿಫಲಗೊಂಡಿತ್ತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ ಪರಿಹಾರ ಕೊರತೆ 2.35 ಲ.ಕೋ.ರೂ.ಗಳಾಗಲಿವೆ ಎಂದು ಅಂದಾಜಿಸಲಾಗಿದೆ.

ಆರ್‌ಬಿಐನ ವಿಶೇಷ ಗವಾಕ್ಷಿಯ ಮೂಲಕ 97,000 ಕೋಟಿ ರೂ.ಸಾಲ ಪಡೆಯುವುದು ಅಥವಾ ಮಾರುಕಟ್ಟೆಯಿಂದ 2.35 ಲ.ಕೋ. ರೂ.ಗಳ ಸಾಲವೆತ್ತುವುದು ಹೀಗೆ ಎರಡು ಪರ್ಯಾಯ ಆಯ್ಕೆಗಳನ್ನು ಕೇಂದ್ರವು ಕಳೆದ ಆಗಸ್ಟ್‌ನಲ್ಲಿ ರಾಜ್ಯಗಳ ಮುಂದಿರಿಸಿತ್ತು.

ಸಾಲವನ್ನು ಮರುಪಾವತಿಸಲು ವಿಲಾಸಿ ಮತ್ತು ‘ಸಿನ್ ಗೂಡ್ಸ್ (ಪಾಪದ ಸರಕು)” ಗಳ ಮೇಲೆ ಪರಿಹಾರ ಮೇಲ್ತೆರಿಗೆ ಆಕರಣೆಯನ್ನು ವಿಸ್ತರಿಸುವುದನ್ನೂ ಅದು ಪ್ರಸ್ತಾವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News