ಬಾಳೆಪುಣಿ: ಒಂಟಿ ಮಹಿಳೆಯ ಅತ್ಯಾಚಾರ-ಹತ್ಯೆ ಪ್ರಕರಣ; ಆರೋಪಿ ಪೊಲೀಸ್ ವಶಕ್ಕೆ

Update: 2020-10-14 06:02 GMT

ಕೊಣಾಜೆ, ಅ.14: ಕೊಣಾಜೆ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲು ಸಮೀಪದ ಬೆಳ್ಳೇರಿ ಬಳಿ ಕೆಲದಿನಗಳ ಹಿಂದೆ ನಡೆದ ಅವಿವಾಹಿತ ಮಹಿಳೆಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಸಕಲೇಶಪುರ ಮೂಲದ 30 ವರ್ಷದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ಸಕಲೇಶಪುರದವನಾದರೂ ಆತನ ಪತ್ನಿಯ ಮನೆ ಮುಡಿಪು ಸಮೀಪ ಪಾತೂರು ಬದಿಮಾರ್ ಎನ್ನಲಾಗಿದೆ. ಆತ ಹೂಹಾಕುವ ಕಲ್ಲು ಬಳಿ ನವಗ್ರಾಮ ಸೈಟ್ ನಲ್ಲಿ ಹಿಂದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಳೆಪುಣಿ ಗ್ರಾಮದ ಅವಿವಾಹಿತೆ ಮಹಿಳೆ ಕುಸುಮಾ(53) ತಮ್ಮ ಬೆಳ್ಳೇರಿಯ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸೆ.26ರಂದು ಮಹಿಳೆಯ ಸಹೋದರ ಕರೆ ಮಾಡಿದಾಗ ಫೋನ್ ರಿಸೀವ್ ಮಾಡದಿರುವುದರಿಂದ ಕೆಲಸಗಾರ್ತಿ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಅತ್ಯಾಚಾರ ಎಸಗಿ ಅವರನ್ನು ಕೊಲೆಗೈಯಲಾಗಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಇದೀಗ ವಶಕ್ಕೆ ಪಡೆದಿರುವ ಆರೋಪಿಯನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News