ಬೇಷರತ್ ಕ್ಷಮೆ ಯಾಚಿಸಿದ ಪಾಯಲ್: ಪಾಯಲ್-ರಿಚಾ ವಿವಾದ ಅಂತ್ಯ
ಮುಂಬೈ : ತಮ್ಮ ನಡುವಿನ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿರುವುದಾಗಿ ನಟಿಯರಾದ ರಿಚಾ ಛಡ್ಡಾ ಹಾಗೂ ಪಾಯಲ್ ಘೋಷ್ ಇಂದು ಬಾಂಬೆ ಹೈಕೋರ್ಟಿಗೆ ತಿಳಿಸಿದ್ದಾರೆ. ಇಬ್ಬರ ನಡುವಿನ ಒಡಂಬಡಿಕೆಯಂತೆ ಪಾಯಲ್ ಅವರು ರಿಚಾ ಛಡ್ಡಾ ವಿರುದ್ಧ ನೀಡಿದ್ದ ಹೇಳಿಕೆಯನ್ನು ಹಿಂಪಡೆದು ಬೇಷರತ್ ಕ್ಷಮೆಯನ್ನೂ ಯಾಚಿಸಿದ್ದಾರೆ.
ತಮ್ಮ ವಿರುದ್ಧ ಸುಳ್ಳು, ಆಧಾರರಹಿತ, ಅವಮಾನಕರ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕಳೆದ ವಾರ ರಿಚಾ ಛಡ್ಡಾ ಅವರು ಪಾಯಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರಲ್ಲದೆ ತಮಗೆ ಪರಿಹಾರ ನೀಡಬೇಕೆಂದೂ ಬೇಡಿಕೆ ಇಟ್ಟಿದ್ದರು.
ಪಾಯಲ್ ಅವರು ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸುವ ವೇಳೆ ರಿಚಾ ಹಾಗೂ ಇತರ ಇಬ್ಬರು ನಟಿಯರ ಹೆಸರುಗಳನ್ನು ಎಳೆದು ತಂದಿದ್ದು ಈ ಬೆಳವಣಿಗೆಗೆ ಕಾರಣವಾಗಿತ್ತು.
ಇಬ್ಬರು ನಟಿಯರೂ ವಿವಾದ ತಮ್ಮೊಳಗೆ ಇತ್ಯರ್ಥಪಡಿಸಿಕೊಂಡಿದ್ದಾರೆಂದು ಬುಧವಾರ ಬಾಂಬೆ ಹೈಕೋರ್ಟಿಗೆ ಪಾಯಲ್ ಪರ ವಕೀಲ ನಿತಿನ್ ಸತ್ಪುತೆ ತಿಳಿಸಿದರಲ್ಲದೆ ಎರಡೂ ಕಡೆಯವರು ಈ ವಿಚಾರದಲ್ಲಿ ತಾವು ಪರಸ್ಪರ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಹಾಗೂ ಪರಿಹಾರಕ್ಕೆ ಬೇಡಿಕೆಯಿಡುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎಂದರು. ಈ ಹೇಳಿಕೆಯನ್ನು ಸ್ವೀಕರಿಸಿದ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಗೊಳಿಸಿದೆ.