ಶೇ.72ರಷ್ಟು ಭಾರತೀಯ ಅಮೆರಿಕನ್ನರಿಂದ ಬೈಡನ್ ಗೆ ಮತ ಹಾಕಲು ಯೋಜನೆ: ಸಮೀಕ್ಷೆ
ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ.72ರಷ್ಟು ನೋಂದಾಯಿತ ಭಾರತ ಮೂಲದ ಅಮೆರಿಕ ಮತದಾರರು ಜೋ ಬೈಡನ್ ಗೆ ಮತ ಚಲಾಯಿಸಲು ಯೋಜಿಸಿದ್ದಾರೆ ಹಾಗೂ ಉಳಿದವರಲ್ಲಿ ಕೇವಲ 22 ಶೇ.ಮಾತ್ರ ಡೊನಾಲ್ಡ್ ಟ್ರಂಪ್ ಗೆ ಮತ ಚಲಾಯಿಸಲಿದ್ದಾರೆ ಎಂದು 2020ರ ಇಂಡಿಯನ್ ಅಮೆರಿಕನ್ ಅಟಿಟ್ಯೂಡ್ ಸರ್ವೇ(ಐಎಎಎಸ್) ತಿಳಿಸಿದೆ.
ಸೆಪ್ಟಂಬರ್ ಮೊದಲ 20 ದಿನಗಳಲ್ಲಿ ಆನ್ ಲೈನ್ ನಲ್ಲಿ ಸಮೀಕ್ಷೆ ನಡೆಸಿದ 936 ಭಾರತೀಯ ಅಮೆರಿಕನ್ನರ ಪ್ರತಿಕ್ರಿಯೆಗಳ ಆಧಾರದಲ್ಲಿ ದತ್ತಾಂಶ ರಚಿಸಲಾಗಿದೆ.
ಹಿಂದಿನ ಅಧ್ಯಯನದ ಅನುಗುಣವಾಗಿ… ಸಮುದಾಯದ ಸದಸ್ಯರು ಡೆಮಾಕ್ರಟಿಕ್ ಪಕ್ಷದೊಂದಿಗೆ ಬಲವಾಗಿ ಗುರುತಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ ಎಂದು ದತ್ತಾಂಶ ಹೇಳುತ್ತದೆ. 56 ಪ್ರತಿಶತದಷ್ಟು ಜನರು ತಾವು ಡೆಮಾಕ್ರಟಿಕ್ ಎಂದು ಗುರುತಿಸಿಕೊಳ್ಳುತ್ತೇವೆ ಎಂದು ಹೇಳಿದರೆ, ಕೇವಲ 16 ಶೇ.ದಷ್ಟು ಜನರು ತಮ್ಮನ್ನು ರಿಪಬ್ಲಿಕನ್ ಎಂದು ಗುರುತಿಸಿಕೊಂಡಿದ್ದಾರೆ.
ಮತದಾನದ ನಿರ್ಧಾರದಲ್ಲಿ ಅಮೆರಿಕ-ಭಾರತ ಸಂಬಂಧವು ಒಂದು ದೊಡ್ಡ ಅಂಶ ಎಂದು ಪರಿಗಣಿಸಬೇಡಿ ಎಂದು ಸಮೀಕ್ಷಾ ವರದಿ ಹೇಳಿದೆ. ತಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಿಕಟ ಸಂಬಂಧ ಇರಿಸಿಕೊಂಡಿದ್ದನ್ನು ಒತ್ತಿ ಹೇಳಿರುವ ಟ್ರಂಪ್, ಭಾರತದಿಂದ ಉತ್ತಮ ಬೆಂಬಲ ಸಿಗಲಿದೆ ಎಂದು ವಿಶ್ವಾಸದಲ್ಲಿದ್ದಾರೆ.