ರೈತರ ಆತ್ಮಹತ್ಯೆ ಮತ್ತು ಮಹಿಳಾ ರೈತರು

Update: 2020-10-14 19:30 GMT

ನ್ಯಾಶನಲ್ ಕ್ರೈಂ ಬ್ಯುರೋದ ವರದಿಯ ಪ್ರಕಾರ 1995ರಿಂದ 2016ರ ವರೆಗೆ ದೇಶದಲ್ಲಿ 3,32,798 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಶೇ.94 ಗಂಡಸರು. ಗಂಡ ಆತ್ಮಹತ್ಯೆ ಮಾಡಿಕೊಂಡಾಗ ಹೆಂಡತಿ ಒಂದೇ ಹೊಡೆತಕ್ಕೆ ಸಂಪೂರ್ಣ ಒಂಟಿಯಾಗಿ, ಗಂಡನ ಸಾಲ, ಕೃಷಿಕೆಲಸ ಮತ್ತು ಮನೆಯ ಜವಾಬ್ದಾರಿ ಎಲ್ಲವನ್ನೂ ಹೊತ್ತುಕೊಳ್ಳುವಂತಹ ಸ್ಥಾನಕ್ಕೆ ನೂಕಲ್ಪಟ್ಟಿದ್ದನ್ನು ನಾವು ಕಾಣುತ್ತೇವೆ.

  1980ರಲ್ಲಿ ಮೊತ್ತ ಮೊದಲ ಬಾರಿಗೆ ಗುಂಟೂರಿನಲ್ಲಿ ರೈತ ಆತ್ಮಹತ್ಯಾ ಸರಣಿಯು ಮಾಧ್ಯಮದ ಗಮನಸೆಳೆಯಿತು. ಆ ಸರಣಿಯ ಕೊನೆ ಇನ್ನೂ ಕಂಡಿಲ್ಲ.ಇದು ಆತ್ಮಹತ್ಯೆ ಬಾಧಿತ ಪ್ರದೇಶವಲ್ಲವೆನ್ನುವಂತಿಲ್ಲ. ಕೃಷಿಯ ಒಳಸುರಿ ಮತ್ತು ಮಾರಾಟ ಎರಡಕ್ಕೂ ಪೂರ್ಣವಾಗಿ ಮಾರುಕಟ್ಟೆಯನ್ನವಲಂಬಿಸಿದ ಪ್ರದೇಶದಲ್ಲಿ ಅತಿ ಹೆಚ್ಚು ರೈತ ಆತ್ಮಹತ್ಯೆ ಇರುವುದನ್ನು ಕಾಣಬಹುದು. ರೈತ ಆತ್ಮಹತ್ಯೆಯು ಆರ್ಥಿಕ, ಸಾಮಾಜಿಕ ಮತ್ತು ಪಾರಿಸಾರಿಕ ವೈಫಲ್ಯದ ಫಲ. ಸಮಾಜದಲ್ಲಿ ಆರ್ಥಿಕ ಮತ್ತು ಪಾರಿಸಾರಿಕ ಕುಸಿತವೆರಡನ್ನೂ ಒಟ್ಟಿಗೆ ಪ್ರತಿಬಿಂಬಿಸುವುದು ರೈತ ಆತ್ಮಹತ್ಯೆ. ಭೂಹೀನರಲ್ಲೂ, ಸಣ್ಣ ರೈತರಲ್ಲೂ, ಬೇರೆಯವರ ಭೂಮಿಯನ್ನು ಬಾಡಿಗೆಗೆ ಪಡೆದುಕೊಂಡು ಕೃಷಿ ಮಾಡುತ್ತಿದ್ದ ರೈತರಲ್ಲಿ ಹೆಚ್ಚು ಕಾಣುತ್ತೇವೆಯೇ ವಿನಃ ಸರಕಾರದ ನೀರಾವರಿ ರಕ್ಷಣೆಯನ್ನು ಪಡೆದ ದೊಡ್ಡ ರೈತರಲ್ಲಿ ನಾವು ಹೆಚ್ಚಾಗಿ ಕಾಣುವುದಿಲ್ಲ. ಕೃಷಿಯ ಸಂಕಟಗಳು ಕೃಷಿಗಾಗಿ ಮಾತ್ರವಲ್ಲದೆ ಆರೋಗ್ಯ, ಮಕ್ಕಳ ಶಿಕ್ಷಣಕ್ಕಾಗಿ, ಇನ್ನಿತರ ವಿಚಾರಗಳಿಗಾಗಿಯೂ ಅವರನ್ನು ಹೊರಬರಲಾರದಂತಹ ಸಾಲದ ಸುಳಿಯಲ್ಲಿ ಸಿಕ್ಕಿಸಿ ಬಂಧಿಸುತ್ತವೆ.

 ಹೆಣ್ಣುಮಕ್ಕಳೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶಹರದ ಹೆಣ್ಣುಮಕ್ಕಳು, ಹಳ್ಳಿಯ ಹೆಣ್ಣುಮಕ್ಕಳು, ಗೃಹಿಣಿ, ಮನೆಕೆಲಸದವರು, ಕೃಷಿ ಕೂಲಿಕಾರಳೆಂದು ಅವರನ್ನು ವಿಂಗಡಿಸಿ ನೋಡಿದರೆ ನಮಗೆ ಆ ಹೆಣ್ಣುಮಕ್ಕಳ ಸಾವಿನಲ್ಲಿ ದಿನಕೂಲಿಕಾರರ, ಯಾವುದೇ ವೇತನವಿಲ್ಲದ ಗೃಹಿಣಿಯರ ಮತ್ತು ರೈತ ಮಹಿಳೆಯರ ಆತ್ಮಹತ್ಯೆಗಳೆಷ್ಟೆಷ್ಟು ಎಂಬುದು ಬಹಳ ಸ್ಪಷ್ಟವಾಗಿ ಕಾಣುತ್ತವೆ. ಸಾವಿನಲ್ಲೂ ಇವರನ್ನು ರೈತರೆಂದಾಗಲೀ, ಕೂಲಿಕಾರರೆಂದಾಗಲೀ ಸರಕಾರವು ಗುರುತಿಸುವುದಿಲ್ಲ. ಯಾಕೆಂದರೆ ಮಹಿಳೆಯರೆಲ್ಲರೂ ಭೂರಹಿತರೇ. ಮನೆಯಲ್ಲಿ ಜಮೀನಿದ್ದರೂ ಕೂಡ ಅವರು ಭೂರಹಿತರೇ.

ಅಲ್ಲಿಯವರೆಗೆ ಯಾವ ನಿರ್ಧಾರಗಳನ್ನೂ ಕೈಗೊಳ್ಳದ ಮಹಿಳೆ ಗಂಡ ಆತ್ಮಹತ್ಯೆ ಮಾಡಿಕೊಂಡಾಗ ಒಮ್ಮೆಲೇ ಮನೆ, ಗಂಡನ ಸಾಲ, ಮಕ್ಕಳು, ಭೂಮಿ ಎಲ್ಲದರ ಬಗೆಗೂ ನಿರ್ಧಾರ ತೆಗೆದುಕೊಳ್ಳಬೇಕಾದ ಸ್ಥಾನಕ್ಕೆ ನೂಕಲ್ಪಡುತ್ತಾಳೆ, ಯಾವುದೇ ತಯಾರಿ ಇಲ್ಲದೆಯೇ! ಅತ್ತ ಸಂಪನ್ಮೂಲವೂ ಇಲ್ಲ, ಇತ್ತ ಮಾಹಿತಿ-ತಿಳುವಳಿಕೆಯೂ ಇಲ್ಲದ ಪರಿಸ್ಥಿತಿಯಲ್ಲಿ. ಆತ್ಮಹತ್ಯೆಯ ವಿಚಾರಣೆ ನಡೆಯುತ್ತದೆ. ಯಾರ್ಯಾರೋ ಬಂದು ಯಜಮಾನಿಕೆ ನಡೆಸುತ್ತಾರೆ. ಏನೇನೋ ನಿರ್ಧಾರಗಳು ಆಕೆಯ ಮೇಲೆ ಹೇರಲ್ಪಡುತ್ತವೆ. ದುಃಖದಲ್ಲಿ ಮುಳುಗಿದ ಆಕೆ ಎದ್ದು ಹೊರಗೆನೋಡುವ ವೇಳೆಗೆ ಏನೇನೋ ನಿರ್ಧಾರಗಳಾಗಿಬಿಟ್ಟಿರುತ್ತವೆ. ಆಕೆಗೆ ಬಹಳ ಮುಖ್ಯವೆನಿಸುವ ವಿಚಾರಗಳೆಲ್ಲವೂ ಹಾಗೆಯೇ ಬಿದ್ದಿರುತ್ತವೆ. ಅವು ಮುಖ್ಯವೆಂದು ಯಾರಿಗೂ ಅನ್ನಿಸುವುದೂ ಇಲ್ಲ. ವಿಚಾರಣೆಗಾಗಿ ಬಂದವರು ಅವಳನ್ನು ಕೂರಿಸಿ ಅವೆಲ್ಲ ವಿಚಾರಗಳನ್ನು ಚರ್ಚಿಸುವುದೂ ಇಲ್ಲವಾಗಿ ಮುಂದೆ ಅವೆಲ್ಲದರ ಬಗೆಗೂ ಯಾರೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ಆಕೆಗೆ ಸಿಗಬೇಕಾದ ಪರಿಹಾರಧನ ಪೂರ್ತಿಯಾಗಿ ಕೈಗೆ ತಲುಪಿದೆಯೇ? ಸಾಲದ ಕತೆ ಮುಂದೇನಾಯಿತು? ಮಕ್ಕಳ ಶಿಕ್ಷಣ, ಆರೋಗ್ಯದ ವಿಚಾರಗಳೇನೇನು? ಭೂಮಿ ಅವಳ ಹೆಸರಿಗೆ ಬಂತೇ? ಇವೆಲ್ಲ ವಿಷಯಗಳು ಹೊರಗಿನವರಿಗೆ ಗೌಣವೆನಿಸಿ ಆಕೆಯೇ ಒಬ್ಬೊಂಟಿಯಾಗಿ ಎಲ್ಲವನ್ನೂ ನಿಭಾಯಿಸುವ ಪರಿಸ್ಥಿತಿ ಬರುತ್ತದೆ.ಬಹುಶಃ ಮತ್ತೊಮ್ಮೆ ಬಂದು ಆಕೆಯೊಂದಿಗೆ ಕುಳಿತು ಮಾತಾಡಿದ್ದರೆ ಸರಕಾರಕ್ಕೂ ಮಹಿಳಾ ರೈತರ ಸಮಸ್ಯೆಗಳು ಅರ್ಥವಾಗಿ ಅದಕ್ಕೆ ತಕ್ಕ ನೀತಿನಿಯಮಗಳು ರೂಪಗೊಳ್ಳುತ್ತಿದ್ದುವೇನೋ.

ಬಹುತೇಕ ಸಂದರ್ಭಗಳಲ್ಲಿ ಗಂಡ ಸಾಲ ಮಾಡಿರುವುದೂ ಆಕೆಗೆ ಗೊತ್ತಿರುವುದಿಲ್ಲ. ಹಳ್ಳಿಗಳಲ್ಲಿ ಎಷ್ಟು ಗಂಡಸರು ತಮ್ಮ ಆರ್ಥಿಕ ವಿಚಾರಗಳನ್ನು ಹೆಂಡತಿಯೊಂದಿಗೆ ಹಂಚಿಕೊಳ್ಳುತ್ತಾರೆ? ಸಾಲ ಮಾಡುವಾಗ ಹೆಂಡತಿಯನ್ನು ಕೇಳಿ ಮಾಡುತ್ತಾರೆ? ತಂದ ಸಾಲವನ್ನು ಹೇಗೆ ಬಳಸಬೇಕೆಂದು ಆಕೆಯನ್ನು ಕೇಳುತ್ತಾರೆ? ವಾಣಿಜ್ಯ ಬೆಳೆಯನ್ನು ಬೆಳೆಯುವಾಗ ಹೆಂಡತಿಯ ಜೊತೆಗೆ ಚರ್ಚೆ ಮಾಡುತ್ತಾರೆ? ಎಲ್ಲವೂ ಕೈಮೀರಿ ನೇಣಿಗೆ ಕೊರಳು ಕೊಟ್ಟ ನಂತರವೇ ಆಕೆಗೆ ವಿಷಯ ಗೊತ್ತಾಗುವುದು. ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳಲು ಆಕೆ ಸಾಲಕ್ಕಾಗಿ ಬ್ಯಾಂಕಿಗೆ ಹೋದರೆ ಆಕೆಗೇನೂ ಸಿಗದು. ಒಂದು, ಜಮೀನು ಅವಳ ಹೆಸರಲ್ಲಿ ಇಲ್ಲ. ಜಮೀನಿನ ಜಾಮೀನು ಇಲ್ಲದೆ ಯಾವ ರಾಷ್ಟ್ರೀಕೃತ ಬ್ಯಾಂಕೂ ಸಾಲ ಕೊಡುವುದಿಲ್ಲ. ಹೆಚ್ಚು ಬಡ್ಡಿಯ, ಹೆಚ್ಚು ಶೋಷಣೆಯ ಖಾಸಗಿ ಸಾಲ, ಮೈಕ್ರೋ ಫೈನಾನ್ಸ್‌ಗಳ ಕಡೆಗೇ ಆಕೆ ಹೊರಳಿ ಕೈಯೊಡ್ಡಬೇಕು. ಕೈಹಿಡಿದೆತ್ತಬೇಕಾದ ಸರಕಾರ ಸಾಲವೆಲ್ಲವನ್ನೂ ತೀರಿಸಿ, ಭೂಮಿಯನ್ನು ಅವಳ ಹೆಸರಿಗೆ ಮಾಡುವ, ಜೊತೆಗೆ ಕೈಗೊಂದಿಷ್ಟು ಹಣವನ್ನು ಕೊಡುವಂತಹ ಪರಿಹಾರಕ್ಕೆ ಸರಕಾರವು ಪ್ರಯತ್ನಿಸಿದ್ದರೆ ಆಕೆಯೂ ದುಃಖದ ಮಡುವಿನಿಂದ ತಲೆಯೆತ್ತುತ್ತಿದ್ದಳೇನೋ.

ಆತ್ಮಹತ್ಯೆ ಮಾಡಿಕೊಳ್ಳುವ ರೈತರು 40-45ರ ಮಧ್ಯೆಯೇ ಇದ್ದು ಹೆಂಡತಿಯು 30-40ರೊಳಗಿನವಳಿರುತ್ತಾಳೆ. ಬಹುತೇಕ ಸಂದರ್ಭಗಳಲ್ಲಿ ಮೊಮ್ಮಕ್ಕಳಿದ್ದರೂ ಕೂಡ ಸೊಸೆಯನ್ನು ಮನೆಯಿಂದ ಹೊರಹಾಕುತ್ತಾರೆ. ಹೊಲ, ಮನೆಗಳಿಗೆ ಅವಳ ಹೆಸರನ್ನೂ ಕೂಡಿಸುವ ಬದಲು ಆಕೆಯನ್ನು ಭೂಹೀನ, ವಸತಿಹೀನ ಮಾಡಿಬಿಡುತ್ತಾರೆ. ತವರು ಮನೆಗೆ ಬಂದರೆ ಅಣ್ಣ ತಮ್ಮಂದಿರ ಮದುವೆಯಾಗುವವರೆಗೆ ಮಾತ್ರ ಅಲ್ಲಿ ಆಕೆಗೆ ಸ್ಥಾನ. ಮುಂದೆ ಬಾಡಿಗೆ ಮನೆಯೇ ಗತಿ. ನಮ್ಮ ದೇಶದಲ್ಲಿ ಭೂ ದಾಖಲೆಗಳು ವಾರಸುದಾರರಿಗೆ ವರ್ಗವಾಗುವ ಪ್ರಕ್ರಿಯೆ ಅದೆಷ್ಟು ಕ್ಲಿಷ್ಟ ಮತ್ತು ದುಬಾರಿಯೆಂದರೆ ಬಹುತೇಕ ಕೇಸುಗಳಲ್ಲಿ ಉಳುಮೆ ಮಾಡುತ್ತಿರುವವರ ಹೆಸರಲ್ಲಿ ಭೂಮಿ ಇರುವುದೇ ಇಲ್ಲ. ಅಜ್ಜ ಮುತ್ತಜ್ಜನ ಹೆಸರಿನಲ್ಲಿಯೇ ಭೂಮಿಯ ದಾಖಲೆಗಳು ಮುಂದುವರಿದಿರುತ್ತವೆ. ವರ್ಗಾವಣೆ ಆದರೂ ಕೂಡ ಹಿರಿಯರೆಲ್ಲ ಸೇರಿ ಮುಂದೆ ಯಜಮಾನನಾಗುವ ಮಗನ ಹೆಸರಿಗೇ ಭೂಮಿಯನ್ನು ಮಾಡುತ್ತಾರೆ ವಿನಹ ಮಧ್ಯೆ ತಾಯಿಯೊಬ್ಬಳಿರುವುದು ಯಾರಿಗೂ ಕಾಣುವುದೇ ಇಲ್ಲ. ಭೂಮಿ ದಾಖಲೆಗಳ ಸಮಸ್ಯೆ ಇರುವ ಕಾರಣಕ್ಕಾಗಿಯೇ ಬಹುತೇಕ ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಸಿಗುವುದಿಲ್ಲ, ಸಾಲಮನ್ನಾ ಆಗುವುದು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮಾತ್ರ. ಆಕೆಯ ಹೆಸರಿಗೆ ಭೂಮಿ ಆಗದೇ ಇರುವ ಕಾರಣಕ್ಕೆ ಮಹಿಳೆಯನ್ನು ಸರಕಾರವು ರೈತ ಮಹಿಳೆ ಎಂದು ಗುರುತಿಸುವುದೇ ಇಲ್ಲ. ಅಕಸ್ಮಾತ್ ಭೂಮಿಯು ಗಂಡನ ಹೆಸರಿಗೇ ಇದ್ದು, ಅದನ್ನಾಕೆ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಹೊರಟರೆ ಎದುರಿಸಬೇಕಾದ ಸಮಸ್ಯೆಗಳು ಒಂದೆರಡಲ್ಲ.

ಯಾರಿಗೂ ಗೊತ್ತಿಲ್ಲದ, ಎಂದೂ ಪ್ರಚಾರಕ್ಕೆ ಬಾರದ ವಿಷಯವೊಂದಿದೆ ಇಲ್ಲಿ. 2007ರಲ್ಲಿ ಕರ್ನಾಟಕ ಸರಕಾರದ ಕಂದಾಯ ಇಲಾಖೆಯು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಒಂದು ಆದೇಶ ಹೊರಡಿಸಿತು. ‘‘ಪ್ರತಿಯೊಂದು ಭೂದಾಖಲೆಯಲ್ಲೂ ಪತಿಯ ಜೊತೆಗೆ ಪತ್ನಿಯ ಹೆಸರನ್ನೂ ದಾಖಲಿಸಬೇಕು’’ ಎಂದು. ಯಾವ ಜಿಲ್ಲಾಧಿಕಾರಿಯೂ, ಕಂದಾಯ ಅಧಿಕಾರಿಗಳೂ ಈ ಆದೇಶವನ್ನು ಪಾಲಿಸಿಲ್ಲ! ಭೂಮಿ ಮತ್ತು ಹೆಣ್ಣು ಎಂದೂ ಪುರುಷರ ಆಧಿಪತ್ಯದಲ್ಲೇ ಇರಬೇಕು ಎಂಬ ಅವರೊಳಗಿರುವ ಮನೋಭಾವ ಅಡ್ಡಿಯಾಗಿ ನಿಂತಿರಬೇಕು.

ತನ್ನ ಹೆಸರಿಗೆ ಭೂಮಿ ಆಗಲಿ, ಬಿಡಲಿ, ಗಂಡ ಬಿಟ್ಟು ಹೋದ ಭೂಮಿಯ ಕೆಲಸಗಳ ಕಡೆ ಗಮನ ಹರಿಸಬೇಕು. ದಾಖಲೆಗಳು ಏನೇ ಹೇಳಲಿ, ಜವಾಬ್ದಾರಿ ಮಾತ್ರ ಅವಳದ್ದೇ ತಾನೇ? ನೆಲಕ್ಕಿಟ್ಟ ನೇಗಿಲನ್ನು ಎತ್ತಿ ಹೆಗಲಿಗೆ ಹಾಕಿಕೊಂಡು ಆಕೆ ಮುಂದೆ ಸಾಗಲೇಬೇಕು. ಗಂಡ ಮಾಡುತ್ತಿದ್ದ ಹಾದಿಯಲ್ಲೇ ಕೃಷಿಯನ್ನು ಮುಂದುವರಿಸಬೇಕು. ದುಬಾರಿಯ ಒಳಸುರಿಗಳು. ರಾಸಾಯನಿಕಗಳು, ದುಬಾರಿ ಕಳೆನಾಶಕಗಳು. ಗಂಡ ಸಿಕ್ಕಿಕೊಂಡ ಸುಳಿಯಲ್ಲಿ ತಾನೂ ತನ್ನನ್ನು ಸಿಕ್ಕಿಸಿಕೊಳ್ಳುತ್ತ ಮುಂದುವರಿಯುತ್ತಾಳೆ.

ಅಧಿಕಾರಿಗಳು ಕಾನೂನುಗಳನ್ನು ಪಾಲಿಸಿಲ್ಲ. ರಾಜಕಾರಣಿಗಳು ಹಾದಿ ತಪ್ಪಿಸಿದ್ದಾರೆ. ಪರಿಣಾಮವಾಗಿ ಉಳುವವರಿಗೇ ಭೂಮಿ ಎಂಬಂತಹ ಅತ್ಯುನ್ನತ ವಿಚಾರದ ಕಾನೂನು ಕೂಡ ಮಣ್ಣುಪಾಲಾಗಿದೆ. ತಮ್ಮಷ್ಟಕ್ಕೆ ಕೃಷಿ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ಗ್ರಾಮೀಣ ಜನರನ್ನು ಶಹರದ ಸ್ಲಂಗೆ ಹೊತ್ತು ಹಾಕಿದೆ. ಮಣ್ಣು, ನೀರು ಕಂಗೆಟ್ಟಿವೆ. ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಭೂಸುಧಾರಣಾ ಕಾನೂನಿಗೆ ತಿದ್ದುಪಡಿ ತರಲು ಸರಕಾರ ಮುಂದಾಗಿದೆ.ಕಾನೂನಿದ್ದಾಗ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ರಾಜಕಾರಣಿಗಳು ಭೂಗಳ್ಳರಾಗಿದ್ದರು. ಈಗ ಎಲ್ಲರೂ ಒಬ್ಬರೇ ಆಗಿದ್ದಾರೆ ಮತ್ತು ಕಳ್ಳಗಿಂಡಿ ರಾಜಮಾರ್ಗವಾಗಿದೆ.

ಈ ಎಲ್ಲಾ ಸಮಸ್ಯೆಗೂ ಮೂಲವಾದ ಕೃಷಿ ಬಿಕ್ಕಟ್ಟನ್ನು ಎತ್ತಿಕೊಳ್ಳದೆ, ಆ ಸಮಸ್ಯೆಯನ್ನು ಬಗೆಹರಿಸದೆ ಈ ಯಾವೊಂದು ಸಮಸ್ಯೆಯೂ ಬಗೆಹರಿಯದು. ರೈತ ಆತ್ಮಹತ್ಯೆಗಳನ್ನು ತಡೆಯಲು ಸರಕಾರ ಮೊತ್ತ ಮೊದಲು ಮಾಡಬೇಕಾದ್ದೆಂದರೆ ಕೃಷಿ ಬಿಕ್ಕಟ್ಟಿನ ನಿವಾರಣೆ. ಪರಿಸರಕ್ಕೆ ವಿರೋಧಿಯಾದ, ಅತಿಯಾದ ಒಳಸುರಿಗಳ, ರಾಸಾಯನಿಕ ಮತ್ತು ಯಾಂತ್ರೀಕೃತ ಕೃಷಿಯು ಮಹಿಳೆಯರ ಪಾತ್ರವನ್ನು ಸಂಪೂರ್ಣ ಗೌಣವಾಗಿಸಿದೆ. ಇಂತಹ ಕೃಷಿಯೇ ರೈತನನ್ನು ಆತ್ಮಹತ್ಯೆಯತ್ತ ದೂಡಿದ್ದು. ಗಂಡನ ಆತ್ಮಹತ್ಯೆಯ ನಂತರ ನಿಜವಾಗಿ ಪೀಡಿತೆಯಾದ ರೈತಮಹಿಳೆಯ ಸಮಸ್ಯೆಗಳಾವವು ಎಂಬುದನ್ನು ಅರ್ಥಮಾಡಿಕೊಳ್ಳುವ, ಮಹಿಳಾ ದೃಷ್ಟಿಯಿಂದ ಕೃಷಿಯನ್ನು ನೋಡುವ, ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ಆಗಿದ್ದು ಇಲ್ಲವೇ ಇಲ್ಲವೆನ್ನಬಹುದು. ಮಹಿಳಾ ರೈತರನ್ನು ರೈತರೆಂದು ಗುರುತಿಸುವ ಮತ್ತು ಆಕೆಯಲ್ಲಿರುವ ಮಾತೃತ್ವದ ಗುಣದಿಂದ ಕೃಷಿಯನ್ನು ಸಲಹುವ ಆಕೆಯ ಪರಿಣತಿಯನ್ನು ಬಳಸಿಕೊಳ್ಳದ ಹೊರತು ನಮ್ಮ ಕೃಷಿಗೆ ಉಳಿಗಾಲವೂ ಇಲ್ಲ, ರೈತರಿಗೆ ಉಳಿಗಾಲವೂ ಇಲ್ಲ.

Writer - ಶಾರದಾ ಗೋಪಾಲ

contributor

Editor - ಶಾರದಾ ಗೋಪಾಲ

contributor

Similar News