ಪರ್ಸ್ ಮರಳಿಸಿ ಮತ್ತೆ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಸತ್ತಾರ್ ಗೂಡಿನಬಳಿ

Update: 2020-10-15 08:02 GMT

ವಿಟ್ಲ : ಬಿ ಸಿ ರೋಡಿನ ಅಟೋ ರಿಕ್ಷಾ ಚಾಲಕ (ನೇತ್ರಾವತಿ ವೀರ) ಗೂಡಿನಬಳಿ ನಿವಾಸಿ ಅಬ್ದುಲ್ ಸತ್ತಾರ್ ಅವರು ತನ್ನ ರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋದ ನಗದು ಹಾಗೂ ಇನ್ನಿತರ ಮೌಲ್ಯಯುತ ದಾಖಲೆಗಳಿದ್ದ ಪರ್ಸನ್ನು ವಾರಸುದಾರರನ್ನು ಹುಡುಕಿ ಮರಳಿಸುವ ಮೂಲಕ ಮತ್ತೊಮ್ಮೆ ತನ್ನ ಪ್ರಾಮಾಣಿಕತೆ ಮೆರೆದಿದ್ದಾರೆ.

ಸತ್ತಾರ್ ಅವರು  ತುಂಬೆಯಿಂದ ಬಿ.ಸಿ.ರೋಡು ಕಡೆ ತನ್ನ ಅಟೋ ರಿಕ್ಷಾದಲ್ಲಿ ಬರುತ್ತಿದ್ದ ವೇಳೆ ತುಂಬೆ ಜಂಕ್ಷನ್ ನಲ್ಲಿ ಇಬ್ಬರು ಅಸ್ಸಾಂ ಮೂಲದ ವ್ಯಕ್ತಿಗಳು ರಿಕ್ಷಾಯೇರಿದ್ದರು. ಇವರು ಬಿ.ಸಿ.ರೋಡಿನ ಭಗವತಿ ಬ್ಯಾಂಕ್ ಬಳಿ ಅಟೋ ರಿಕ್ಷಾದಿಂದ ಇಳಿದಿದ್ದರು. ಬಳಿಕ ಸತ್ತಾರ್ ಎಂದಿನಂತೆ ಬಿ ಸಿ ರೋಡಿನ ರಿಕ್ಷಾ ಪಾರ್ಕಿನಲ್ಲಿ ನಿಂತಿದ್ದಾಗ ರಿಕ್ಷಾದ ಹಿಂದಿನ ಸೀಟ್ ನಲ್ಲಿ ಪರ್ಸ್ ಬಿದ್ದಿರುವುದು ಗಮನಕ್ಕೆ ಬಂದಿದೆ. ಸದ್ರಿ ಪರ್ಸಿನಲ್ಲಿ 10 ಸಾವಿರಕ್ಕೂ ಮಿಕ್ಕಿದ ನಗದು ಹಣ, ಇತರ ಕೆಲ ಮೌಲ್ಯಯುತ ದಾಖಲೆಗಳು, ಆಧಾರ್ ಕಾರ್ಡ್, ಎಟಿಎಂ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಿಗೆ ಇತ್ಯಾದಿಗಳಿದ್ದವು. ಆದರೆ ಯಾವುದೇ ದಾಖಲೆಗಳಲ್ಲೂ ಸಂಬಂಧಪಟ್ಟವರ ಮೊಬೈಲ್ ಸಂಖ್ಯೆ ಕಂಡು ಬರಲಿಲ್ಲ. ಈ ಸಂಬಂಧ ರಿಕ್ಷಾದಲ್ಲಿ ಬಂದಿದ್ದ ವ್ಯಕ್ತಿಗಳನ್ನು ಸ್ಥಳೀಯವಾಗಿ ಸತ್ತಾರ್ ಹುಡುಕಾಡಿದರೂ ಎಲ್ಲಿಯೂ ಕಂಡು ಬಾರದ ಹಿನ್ನಲೆಯಲ್ಲಿ ನೇರವಾಗಿ ಬಿ ಸಿ ರೋಡಿನಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಹದೇವ್ ಅವರ ಬಳಿ ವಿಷಯ ಪ್ರಸ್ತಾಪಿಸಿ ಇಬ್ಬರು ಜೊತೆಯಾಗಿ ಪರ್ಸ್ ವಾರಸುದಾರರಿಗೆ ಹುಡುಕಾಡಿದಾಗ ಇಬ್ಬರು ವ್ಯಕ್ತಿಗಳು ಬಿ.ಸಿ.ರೋಡಿನ ಮಣಪ್ಪುರಂ ಫೈನಾನ್ಸ್‍ನಲ್ಲಿ ಕಂಡು ಬಂದಿದ್ದಾರೆ. ಈ ಸಂದರ್ಭ ರಿಕ್ಷಾದಲ್ಲಿ ದೊರೆತ ಪರ್ಸಿನ ಬಗ್ಗೆ ಗುರುತು ಪರಿಚಯ ವಿಚಾರಿಸಿ ಮನವರಿಕೆಯಾದ ಬಳಿಕ ಪರ್ಸನ್ನು ಪೊಲೀಸ್ ಸಿಬ್ಬಂದಿ ಸಹದೇವ್ ಅವರ ಸಮ್ಮುಖದಲ್ಲಿ ಸತ್ತಾರ್ ಅವರು ವಾರಸುದಾರರಾದ ಅಸ್ಸಾಂ ನಿವಾಸಿ ಆರಿಫ್ ಅವರಿಗೆ ಹಸ್ತಾಂತರಿಸಿದರು. 

ಸತ್ತಾರ್ ನೇತ್ರಾವತಿ ನದಿಯಲ್ಲಿ ಮುಳುಗುತ್ತಿದ್ದ ಹಲವರನ್ನು ರಕ್ಷಿಸಿ ನೇತ್ರಾವತಿ ವೀರ ಎಂಬ ಬಿರುದನ್ನೂ ಈ ಹಿಂದೆ ಪಡೆದುಕೊಂಡಿದ್ದು, ಹಲವು ಬಾರಿ ತನ್ನ ರಿಕ್ಷಾದಲ್ಲಿ ಬಿಟ್ಟುಹೋದ ಮೌಲ್ಯಯುತ ಸಾಮಗ್ರಿಗಳನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದರು. ಈ ಬಗ್ಗೆ ನಾಡಿನ ಹಲವು ಮಾಧ್ಯಮಗಳು ಸಚಿತ್ರ ವರದಿಗಳನ್ನೂ ಬಿತ್ತರಿಸಿತು. ಇದೀಗ ಮತ್ತೆ ಸತ್ತಾರ್ ತನ್ನ ಪ್ರಾಮಾಣಿಕತೆಯನ್ನು ಮುಂದುವರಿಸಿರುವ ಬಗ್ಗೆ ಸ್ಥಳೀಯವಾಗಿ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ.

ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಇದರ ಸಂಚಾಲಕರಾಗಿರುವ ಸತ್ತಾರ್ ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ಇದರ ರಿಕ್ಷಾ ಯೂನಿಯನ್ ಸದಸ್ಯರೂ ಆಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News