ನಾವು ಜಾತ್ಯತೀತರಾಗಿದ್ದೆವು,ಸದಾ ಜಾತ್ಯತೀತರಾಗಿರುತ್ತೇವೆ: ತನಿಷ್ಕ್ ಏಕತ್ವಂ ಜಾಹೀರಾತು ನಿರ್ಮಾಪಕಿ ಜೊಯೀಟಾ

Update: 2020-10-15 14:28 GMT

ಈಗ ಹಿಂದೆಗೆದುಕೊಳ್ಳಲಾಗಿರುವ ತನಿಷ್ಕ್ ಏಕತ್ವಂ ಜಾಹೀರಾತನ್ನು ಸೃಷ್ಟಿಸಿದ್ದ ನಿರ್ಮಾಪಕಿ ಜೊಯೀಟಾ ಪಟ್ಪಾಟಿಯಾ ಅವರೊಂದಿಗೆ ವಿಶೇಷ ಸಂದರ್ಶನದ ಸಾರಾಂಶವಿಲ್ಲಿದೆ

ಅಂತರ್ ಧರ್ಮೀಯ ಸೀಮಂತ ಸಮಾರಂಭವನ್ನು ಕೇಂದ್ರಬಿಂದುವಾಗಿ ಹೊಂದಿದ್ದ ತನಿಷ್ಕ್ ಜ್ಯುವೆಲ್ಲರಿಯ ಜಾಹೀರಾತು ವೀಡಿಯೊವನ್ನು ನಿರ್ದೇಶಿಸಿದ್ದ ಪ್ರಶಸ್ತಿ ಪುರಸ್ಕೃತ ಜಾಹೀರಾತು ಚಿತ್ರ ನಿರ್ಮಾಪಕಿ ಜೊಯೀಟಾ ಪಟ್ಪಾಟಿಯಾ ಅವರಿಗೆ ವೀಡಿಯೊದ ಅಧಿಕೃತ ಬಿಡುಗಡೆ ಮತ್ತು ಅದರ ಹಿಂದೆಗೆದುಕೊಳ್ಳುವಿಕೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಮತ್ತು ದ್ವೇಷಸಂದೇಶಗಳ ಮಹಾಪೂರವೇ ಬರುತ್ತಿದೆ.

ಏಶ್ಯಾ ಮತ್ತು ಬ್ರಿಟನ್‌ಗಳಿಗಾಗಿ ಜಾಹೀರಾತುಗಳು ಮತ್ತು ಮ್ಯೂಸಿಕ್ ವೀಡಿಯೊಗಳನ್ನು ಮಾಡಿರುವ ಜೊಯೀಟಾ ವಿಶೇಷ ಸಂದರ್ಶನದಲ್ಲಿ ವಿವಾದಾತ್ಮಕ ಜಾಹೀರಾತಿನ ಬಗ್ಗೆ ಮಾತನಾಡುತ್ತ, ತನಗೆ ಹಲವಾರು ಮೆಚ್ಚುಗೆಯ, ಪ್ರೀತಿ ತುಂಬಿದ ಸಂದೇಶಗಳೂ ಬರುತ್ತಿವೆ ಎಂದು ಹೇಳಿದರು.

‘ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಯ,ದ್ವೇಷದ ವಿಷ ಕಾರುವ ಸಂದೇಶಗಳು ನನಗೆ ಬರುತ್ತಲೇ ಇವೆ,ಆದರೆ ಅವುಗಳನ್ನು ನಿರಂತರವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳಲು ನಾನು ಬಯಸುವುದಿಲ್ಲ. ಈ ಜಾಹೀರಾತಿಗಾಗಿ ನನಗೆ ಹರಿದು ಬರುತ್ತಿರುವ ಪ್ರಶಂಸೆಗಳು ಮತ್ತು ಪ್ರೀತಿಯನ್ನು ಹಂಚಿಕೊಳ್ಳುವುದು ಆಹ್ಲಾದಕರವಾಗಿರುತ್ತದೆ ಎಂದು ನಾನು ಭಾವಿಸಿದ್ದೇನೆ ’ಎಂದರು.

 ತನ್ನ ಮೊದಲ ಚಿತ್ರವೇ ಕೇನ್ಸ್‌ಗೆ ನಾಮಕರಣ ಪಡೆದಿದ್ದ ಹೆಗ್ಗಳಿಕೆಯನ್ನು ಹೊಂದಿರುವ ಜೊಯೀಟಾ ‘ತನಿಷ್ಕ್‌ದ ಜಾಹೀರಾತಿಗಾಗಿ ಏಕತ್ವಂ ಸ್ಕ್ರಿಪ್ಟ್‌ನೊಂದಿಗೆ ನನ್ನನ್ನು ಸಂಪರ್ಕಿಸಿದಾಗ ಅದರಲ್ಲಿಯ ಏಕತೆಯ ಪರಿಕಲ್ಪನೆ ನನಗೆ ಬಹುವಾಗಿ ಹಿಡಿಸಿತ್ತು ಮತ್ತು ಅದರಲ್ಲಿ ಯಾವುದೇ ತಪ್ಪು ನನಗೆ ಕಂಡುಬಂದಿರಲಿಲ್ಲ. ಜಾಹೀರಾತು ಅಭಿಯಾನವು ಏಕತೆಯ ಪರಿಕಲ್ಪನೆಯಿಂದ ಮೂಡಿ ಬಂದಿತ್ತು ಮತ್ತು ಇದೇ ಕಾರಣದಿಂದ ವೀಡಿಯೊಕ್ಕೆ ‘ಏಕತ್ವಂ’ಶೀರ್ಷಿಕೆಯನ್ನು ನೀಡಲಾಗಿತ್ತು. ಅದು ನಾಲ್ಕು ಚಿತ್ರಗಳ ಗುಚ್ಛವಾಗಿದ್ದು,ಸ್ಕ್ರಿಪ್ಟ್‌ಗಳು ಅದ್ಭುತವಾಗಿದ್ದವು. ಅದರಲ್ಲಿ ಯಾವುದೇ ವಿವಾದಾತ್ಮಕತೆ ಕಂಡು ಬಂದಿರಲಿಲ್ಲ,ಇಬ್ಬರು ಮಹಿಳೆಯರು ಪರಸ್ಪರರಿಗಾಗಿ ಕಾಳಜಿ ವಹಿಸುವ ಆ ಕಥೆಯನ್ನು ತೋರಿಸುವುದರಲ್ಲಿ ಯಾವುದೇ ತಪ್ಪು ಇರಲಿಲ್ಲ. ನಮ್ಮ ಧಾರಾವಾಹಿಗಳು ಕೆಲವೊಮ್ಮೆ ಅತ್ತೆಯರನ್ನು ಅತ್ಯಂತ ಋಣಾತ್ಮಕವಾಗಿ ತೋರಿಸುತ್ತವೆ. ಹೀಗಾಗಿ ಸ್ಕ್ರಿಪ್ಟ್ ಅನ್ನು ಮೊದಲ ಬಾರಿಗೆ ಓದಿದಾಗ ಅದು ನನ್ನನ್ನು ಪರವಶಗೊಳಿಸಿತ್ತು. ಅದು ಇಬ್ಬರು ಮಹಿಳೆಯರ ಕುರಿತ,ಗರ್ಭಿಣಿ ಸೊಸೆಯು ಪಡೆಯುತ್ತಿರುವ ಪ್ರೀತಿ ಹಾಗೂ ಆಕೆಯ ಅತ್ತೆ ಮತ್ತು ಕುಟುಂಬ ತಮ್ಮ ಸಂಪ್ರದಾಯವನ್ನು ಮೀರಿ ಸೊಸೆಗೆ ನೀಡುತ್ತಿರುವ ಆದರದ ಕಥೆಯಾಗಿತ್ತು ’ಎಂದು ಹೇಳಿದರು.

‘ಅಂದ ಹಾಗೆ ಅಂತರ್‌ಧರ್ಮೀಯ ವಿವಾಹಗಳು ಅಪರೂಪದ ಘಟನೆಯೇನಲ್ಲ. ನಾವು ಜಾತ್ಯತೀತ ದೇಶವಾಗಿದ್ದೇವೆ ಮತ್ತು ಭಾರತವಿರುವುದೇ ಹಾಗೆ. ನಾವಿಂದು ಅಂತರ್ ಧರ್ಮೀಯ ವಿವಾಹಗಳಿಂದ ಜನಿಸಿದ ಮಕ್ಕಳು ಮತ್ತು ಯುವಜನರ ತಲೆಮಾರು ನೋಡುತ್ತಿದ್ದೇವೆ ಮತ್ತು ಈ ತಲೆಮಾರು ಪ್ರೀತಿಯನ್ನು ತೋರಿಸುವುದರಲ್ಲಿ,ಅದನ್ನು ಹಂಚಿಕೊಳ್ಳುವುದರಲ್ಲಿ ಎರಡೆರಡು ಬಾರಿ ಯೋಚಿಸುವುದಿಲ್ಲ ’ ಎಂದ ಜೊಯೀಟಾ,ಆದರೂ ಜಾಹೀರಾತು ಚಿತ್ರದಿಂದಾಗಿ ತನ್ನ ಮತ್ತು ತನಿಷ್ಕ್ ಬ್ರ್ಯಾಂಡ್ ವಿರುದ್ಧ ದಾಳಿ ನಡೆಯುತ್ತಿರುವುದು ಆಘಾತಕಾರಿಯಾಗಿದೆ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟೆಲ್ಲ ವರ್ಷಗಳಾಗಿವೆ,ನಾವು ಮುಂದುವರಿದಿದ್ದೇವೆ ಎಂದು ನಾನು ಭಾವಿಸಿದ್ದೆ. ನಾವು ಭೂತಕಾಲಕ್ಕೆ ಸರಿದಿದ್ದೇವೆ ಎಂದು ನಾನು ಹೇಳುತ್ತಿಲ್ಲ, ಆದರೆ ಈ ಬಗ್ಗೆ ಸ್ವಲ್ಪ ಚರ್ಚೆಯನ್ನು ನಾವು ನಿರೀಕ್ಷಿಸಿದ್ದೆವು. ಆದರೆ ಈ ಮಟ್ಟದಲ್ಲಿ ದ್ವೇಷ ಪ್ರಕಟವಾಗಿರುವುದು ಮತ್ತು ವಿಷ ಕಾರಿರುವುದು ಆಘಾತವನ್ನುಂಟು ಮಾಡಿದೆ ’ಎಂದರು.

ಜಾಹೀರಾತು ಕುರಿತು ಆನ್‌ಲೈನ್ ಜಾಹೀರಾತು ಚರ್ಚೆಗಳಲ್ಲಿ ಮುಸ್ಲಿಂ ವಧುವನ್ನು ಮತ್ತು ಹಿಂದು ಅತ್ತೆ-ಮಾವನನ್ನು ತೋರಿಸಿದ್ದರೆ ವಿವಾದವುಂಟಾಗುತ್ತಿರಲಿಲ್ಲ ಎಂಬ ಕೆಲವರ ಅಭಿಪ್ರಾಯ ಕುರಿತಂತೆ ಜೊಯೀಟಾ, ಆಗಲೂ ಪ್ರತಿಕ್ರಿಯೆ ಭಿನ್ನವಾಗಿರುತ್ತಿರಲಿಲ್ಲ. ಒಂದೇ ಫ್ರೇಮ್‌ನಲ್ಲಿ ಎರಡು ಧರ್ಮಗಳನ್ನು ನೋಡುವುದೇ ವಿವಾದವನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.

ಜಾಹೀರಾತನ್ನು ಹಿಂದೆಗೆದುಕೊಳ್ಳುವ ಮೂಲಕ ತನಿಷ್ಕ್ ಅತಿಯಾಗಿ ಪ್ರತಿಕ್ರಿಯಿಸಿದೆಯೇ ಎಂಬ ಪ್ರಶ್ನೆಗೆ ಜೊಯೀಟಾ,ತನಿಷ್ಕ್ ತನ್ನ ಸಿಬ್ಬಂದಿಗಳು ಮತ್ತು ಮಳಿಗೆಗಳ ಸುರಕ್ಷತೆಗಾಗಿ ಆ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಉತ್ತರಿಸಿದರು.

ವಿವಾದದ ಬಳಿಕ ತಾನು ಪಡೆಯುತ್ತಿರುವ ಪ್ರೀತಿ ಮತ್ತು ಬೆಂಬಲದ ಮೇಲೆ ಗಮನ ಕೇಂದ್ರೀಕರಿಸಲು ಜೊಯೀಟಾ ಬಯಸಿದ್ದಾರೆ. ‘ಭಾರತದಲ್ಲಿ ಮಾತ್ರವಲ್ಲ,ವಿಶ್ವಾದ್ಯಂತ ಕೆಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ವಿಶ್ವಾದ್ಯಂತ ಜನಾಂಗೀಯ ವಾದವಿದೆ. ಭಾರತದಲ್ಲಿ ಹಲವಾರು ಸಮುದಾಯಗಳಿವೆ ಮತ್ತು ಇಲ್ಲಿ ಅದು ಕಾವೇರಿಸುವ ವಿಷಯವಾಗಿದೆ. ಆದರೆ ಒಂದು ದೇಶವಾಗಿ ನಾವು ನಮ್ಮ ಒಳ್ಳೆಯ ಮುಖವನ್ನು ವಿಶ್ವಕ್ಕೆ ತೋರಿಸಬಾರದೇ? ನಾವು ಯಾವಾಗಲೂ ಜಾತ್ಯತೀತ ದೇಶವಾಗಿದ್ದೆವು ಮತ್ತು ಜಾತ್ಯತೀತ ದೇಶವಾಗಿಯೇ ಉಳಿಯಲಿದ್ದೇವೆ ’ಎಂದರು.

ಕೃಪೆ: thequint.com

Writer - ಸುರೇಶ್ ಮ್ಯಾಥ್ಯೂ- thequint.com

contributor

Editor - ಸುರೇಶ್ ಮ್ಯಾಥ್ಯೂ- thequint.com

contributor

Similar News