ಜಿನೇವ ಒಪ್ಪಂದಕ್ಕೆ ಬದ್ಧರಾಗಿ: ಭಾರತ, ಚೀನಾಕ್ಕೆ ಅಂತರ್ ರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ ಮನವಿ
ಹೊಸದಿಲ್ಲಿ, ಅ.15: ಎರಡೂ ದೇಶಗಳು ಸಹಿ ಹಾಕಿರುವ ಜಿನೆವ ಒಪ್ಪಂದಕ್ಕೆ ಬದ್ಧವಾಗಿರುವಂತೆ ಭಾರತ ಮತ್ತು ಚೀನಾಕ್ಕೆ ಅಂತರ್ ರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ(ಐಸಿಆರ್‌ಸಿ) ಮನವಿ ಮಾಡಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಯುದ್ಧದ ಸಂದರ್ಭ ಎರಡೂ ಕಡೆಯವರು ಪಾಲಿಸಬೇಕಾದ ಅಂತರ್ ರಾಷ್ಟ್ರೀಯ ಶಿಷ್ಟಾಚಾರವನ್ನು ಜಿನೆವ ಒಪ್ಪಂದದಲ್ಲಿ ಸ್ಪಷ್ಟಪಡಿಸಲಾಗಿದೆ.
ಪೌರರು, ನೆರವು ಕಾರ್ಮಿಕರು ಹಾಗೂ ಯುದ್ಧದಲ್ಲಿ ಭಾಗವಹಿಸದವರನ್ನು ಯದ್ಧದ ಪರಿಣಾಮದಿಂದ ರಕ್ಷಿಸಬೇಕು ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ. ಜೂನ್‌ನಲ್ಲಿ ಲಡಾಖ್ ಗಡಿಭಾಗದಲ್ಲಿ ಭಾರತ-ಚೀನಾ ಯೋಧರ ಮಧ್ಯೆ ನಡೆದ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ರೆಡ್‌ಕ್ರಾಸ್ ಸಮಿತಿ ಈ ಮನವಿ ಮಾಡಿಕೊಂಡಿದೆ. ಘಟನೆ ನಡೆದ ಬಳಿಕ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಚೀನಾ ಕಾಯಂ ನಿಯೋಗವನ್ನು ಭೇಟಿಯಾಗಿದ್ದ ರೆಡ್‌ಕ್ರಾಸ್ ಸಮಿತಿ ರಾಜತಾಂತ್ರಿಕ ರೂಪದ ಸಂವಹನ ಮಾಧ್ಯಮವಾಗಿರುವ ‘ಮೌಖಿಕ ಟಿಪ್ಪಣಿ’ಯನ್ನು ಹಸ್ತಾಂತರಿಸಿದೆ.
ಆದರೆ ಮೌಖಿಕ ಟಿಪ್ಪಣಿಯಲ್ಲಿ ಅಡಕವಾಗಿರುವ ವಿಷಯಗಳ ಬಗ್ಗೆ ರಹಸ್ಯ ಕಾಯ್ದುಕೊಳ್ಳಬೇಕಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ರೆಡ್‌ಕ್ರಾಸ್ ಸಮಿತಿಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ರೆಡ್‌ಕ್ರಾಸ್ ಸಮಿತಿ ನಿಯಮಿತವಾಗಿ ಮಾನವೀಯ ವಿಷಯಗಳ ಬಗ್ಗೆ ಮತ್ತು ವಿವಿಧ ಸಂದರ್ಭಗಳಿಗೆ ಅನ್ವಯವಾಗುವ ನಿಯಮಗಳ ಕುರಿತು ಆಂತರಿಕ ವಿಶ್ಲೇಷಣೆಯ ಆಧಾರದಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತದೆ. ಸಂಬಂಧಿತ ಅಧಿಕಾರಿಗಳೊಂದಿಗಿನ ಈ ಮಾತುಕತೆ ಗೌಪ್ಯವಾಗಿರುತ್ತದೆ ಮತ್ತು ಈ ಮಾತುಕತೆಯ ವಿಷಯ ಸೂಚಿ, ವಿವರ ಅಥವಾ ರೆಡ್‌ಕ್ರಾಸ್ ನೀಡಿದ ಸಲಹೆಯನ್ನು ಸಾಮಾನ್ಯವಾಗಿ ಪ್ರಕಟಿಸುವುದಿಲ್ಲ. ಈ ಸೂತ್ರದ ಆಧಾರದಲ್ಲಿ ನಾವು ಭಾರತ ಮತ್ತು ಚೀನಾ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ರೆಡ್‌ಕ್ರಾಸ್ ಸಮಿತಿಯ ವಕ್ತಾರರು ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಮಾತುಕತೆಯ ವಿವರದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಬಾರದೆಂಬ ನಮ್ಮ ಕರ್ತವ್ಯದ ಮಹತ್ವವನ್ನು ಗಮನಿಸಿ, ನಮ್ಮ ಕೆಲಸದ ಆಧಾರವಾದ ಗೌಪ್ಯತೆಯ ತತ್ವವನ್ನು ಪಾಲಿಸುವುದು ನಮ್ಮ ಹೊಣೆಯಾಗಿದೆ. ಇದನ್ನು ಮಾಧ್ಯಮದವರ ಸಹಿತ ಎಲ್ಲರೂ ಅರಿತುಕೊಂಡು ಗೌರವಿಸುವರೆಂದು ಭಾವಿಸುವುದಾಗಿ ವಕ್ತಾರರು ಹೇಳಿದ್ದಾರೆ.
ಭಾರತ ಮತ್ತು ಚೀನಾ 1949ರ ಜಿನೆವಾ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದಕ್ಕೆ ಬಳಿಕ ಮೂರು ಹೊಸ ಶಿಷ್ಟಾಚಾರವನ್ನು ಸೇರಿಸಲಾಗಿದ್ದು ಇದರಲ್ಲಿ ಒಂದಕ್ಕೆ ಭಾರತ ಸಹಿ ಹಾಕಿದ್ದರೆ ಚೀನಾ ಎರಡಕ್ಕೆ ಸಹಿ ಹಾಕಿದೆ. ಸಶಸ್ತ್ರ ಸಂಘರ್ಷದ ಸಮಯದಲ್ಲಿ ಈ ನಿಯಮಗಳನ್ನು ಯುದ್ಧನಿರತ ದೇಶಗಳು ಪಾಲಿಸುತ್ತಿವೆಯೇ ಎಂದು ಮೇಲ್ವಿಚಾರಣೆ ನಡೆಸಲು ಅಂತರ್ ರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಗೆ ಅಧಿಕಾರ ನೀಡಲಾಗಿದೆ.