×
Ad

ಕೇಂದ್ರ ಸರಕಾರ, ಗೂಗಲ್, ಅಮೆಝಾನ್, ಫೇಸ್‌ಬುಕ್‌ಗೆ ಸುಪ್ರೀಂ ನೋಟಿಸ್

Update: 2020-10-15 21:36 IST

ಹೊಸದಿಲ್ಲಿ, ಅ. 15: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವೇದಿಕೆಗಳ ಅಡಿಯಲ್ಲಿ ಸಂಗ್ರಹಿಸಲಾದ ದತ್ತಾಂಶಗಳ ಭದ್ರತೆ ಕೋರಿ ಸಲ್ಲಿಸಲಾದ ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರ, ಗೂಗಲ್, ಅಮೆಜಾನ್, ಫೇಸ್‌ಬುಕ್ ಹಾಗೂ ವ್ಯಾಟ್ಸ್‌ಆ್ಯಪ್‌ಗೆ ನೋಟಿಸು ಜಾರಿ ಮಾಡಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ವೇದಿಕೆಗಳಿಂದ ಸಂಗ್ರಹಿಸಿದ ದತ್ತಾಂಶಕ್ಕೆ ಭದ್ರತೆ ನೀಡುವಂತೆ ಹಾಗೂ ಮೂರನೇ ವ್ಯಕ್ತಿಗೆ ದತ್ತಾಂಶ ನೀಡದಂತೆ ಕೋರಿ ಸಿಪಿಐ ಸಂಸದ ಬಿನೋಯ್ ವಿಶ್ವಾಸಂ ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು. ಗೂಗಲ್, ಅಮೆಜಾನ್, ಫೇಸ್‌ಬುಕ್ ಹಾಗೂ ವ್ಯಾಟ್ಸ್ ಆ್ಯಪ್‌ಗಳು ಭಾರತದ ಕಾರ್ಯನಿರ್ವಹಣಾ ಪಾವತಿ ವ್ಯವಸ್ಥೆಯನ್ನು ಅನುಸರಿಸುತ್ತಿಲ್ಲ. ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ವೇದಿಕೆಗಳ ಭಾರತೀಯರ ದತ್ತಾಂಶವನ್ನು ಕಾರ್ಪೊರೇಟ್ ಸಂಸ್ಥೆಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅವರು ಮನವಿಯಲ್ಲಿ ಆರೋಪಿಸಿದ್ದಾರೆ. ಭಾರತದ ಪ್ರಜೆಗಳ ದತ್ತಾಂಶ ದುರ್ಬಳಕೆ ತಡೆಯಲು ಗೂಗಲ್, ಅಮೆಜಾನ್, ಫೇಸ್‌ಬುಕ್ ಹಾಗೂ ವ್ಯಾಟ್ಸ್ ಆ್ಯಪ್‌ನ ಪಾವತಿ ಸೇವೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಾಗೂ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ, ನಾವು ನೋಟಿಸು ಜಾರಿ ಮಾಡಲಿದ್ದೇವೆ ಎಂದು ಹೇಳಿತು.

ವಿಶ್ವಂ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್, ಈ ವೇದಿಕೆಗಳಲ್ಲಿನ ದತ್ತಾಂಶಗಳ ವಹಿವಾಟು ಭಾರತದ ಸರ್ವರ್‌ನಲ್ಲಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕೆಂದು 2018ರ ಎಪ್ರಿಲ್‌ನಲ್ಲಿ ಆರ್‌ಬಿಐ ಸುತ್ತೋಲೆ ಹೊರಡಿಸಿತ್ತು. ಆದರೆ, ಇದನ್ನು 2018 ಅಕ್ಟೋಬರ್ ವರೆಗೆ ಅನುಸರಿಸಲಾಗಿತ್ತು. ಆದರೆ, ಅನಂತರ ಅನುಸರಿಸಿಲ್ಲ ಎಂದು ಹೇಳಿದರು. ವ್ಯಾಟ್ಸ್ ಆ್ಯಪ್ ತನ್ನ ಮೂಲ ಸಂಸ್ಥೆಯಾದ ಫೇಸ್‌ಬುಕ್‌ನ ಭಾರತದಿಂದ ಹೊರಗಿರುವ ಸರ್ವರ್‌ನಲ್ಲಿ ದತ್ತಾಂಶ ಸಂಗ್ರಹಿಸುತ್ತಿದೆ ಎಂದು ಕೂಡ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ನ್ಯಾಯಪೀಠ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ)ಗೆ ಕೂಡ ನೋಟಿಸು ಜಾರಿ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News