ವಿಧಿ 370ರ ಮರುಸ್ಥಾಪನೆಗೆ ಇತರ ಪಕ್ಷಗಳೊಂದಿಗೆ ಕೈ ಜೋಡಿಸಿದ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ

Update: 2020-10-15 18:18 GMT
ಫೈಲ್ ಚಿತ್ರ

 ಹೊಸದಿಲ್ಲಿ,ಅ.15: ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ,ಅವರ ಬದ್ಧಶತ್ರು ಪಿಡಿಪಿಯ ಮೆಹಬೂಬಾ ಮುಫ್ತಿ ಮತ್ತು ಸಜ್ಜದ್ ಲೋನೆ ಸೇರಿದಂತೆ ಜಮ್ಮು-ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರು ವಿಧಿ 370ರ ಮರುಸ್ಥಾಪನೆ ಮತ್ತು ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಹೋರಾಡಲು ಪರಸ್ಪರ ಒಂದಾಗಿದ್ದು,ಗುರುವಾರ ಸಂಜೆ ಈ ಸಂಬಂಧ ಮಹತ್ವದ ಸಭೆಯೊಂದನ್ನು ಫಾರೂಕ್ ನಿವಾಸದಲ್ಲಿ ನಡೆಸಿದ್ದಾರೆ. ‘ಗುಪ್ಕರ್ ಘೋಷಣೆಗಾಗಿ ಜನತಾ ಮೈತ್ರಿಕೂಟ ’ವನ್ನೂ ಈ ನಾಯಕರು ಹುಟ್ಟುಹಾಕಿದ್ದಾರೆ. ಕಳೆದ ವರ್ಷದ ಆ.5ರಂದು ವಿಧಿ 370ರಡಿ ಜಮ್ಮು -ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರವು ಹಿಂದೆಗೆದುಕೊಂಡಿತ್ತು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು.

ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮುನ್ನಾ ದಿನ ಕಾಶ್ಮೀರ ಕಣಿವೆಯ ಹಲವಾರು ರಾಜಕೀಯ ನಾಯಕರನ್ನು ಬಂಧಿಸಲಾಗಿತ್ತು. ಫಾರೂಕ್(82) ಕಳೆದ ಮಾರ್ಚ್‌ನಲ್ಲಿ ಬಿಡುಗಡೆಗೊಂಡಿದ್ದರೆ,ಮುಫ್ತಿ ಅವರನ್ನು ಮಂಗಳವಾರ ಬಂಧಮುಕ್ತಗೊಳಿಸಲಾಗಿದೆ.

‘ನಮ್ಮದು ಸಾಂವಿಧಾನಿಕ ಹೋರಾಟವಾಗಿದೆ. ರಾಜ್ಯದ ಜನರು 2019,ಆ.5ಕ್ಕೆ ಮುನ್ನ ಹೊಂದಿದ್ದ ಹಕ್ಕುಗಳನ್ನು ಸರಕಾರವು ಮರಳಿಸಬೇಕು ಎಂದು ನಾವು ಬಯಸಿದ್ದೇವೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಿಂದ ಕಿತ್ತುಕೊಂಡಿರುವುದರ ಮರುಸ್ಥಾಪನೆಗಾಗಿ ನಾವು ಹೋರಾಡಲಿದ್ದೇವೆ ’ಎಂದು ಫಾರೂಕ್ ಹೇಳಿದರು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ‘ಗುಪ್ಕರ್ ಘೋಷಣೆ ’ಯ ಕುರಿತು ಭವಿಷ್ಯದ ಕ್ರಮವನ್ನು ರೂಪಿಸುವ ನಿಟ್ಟಿನಲ್ಲಿ ಫಾರೂಕ್ ತನ್ನ ನಿವಾಸದಲ್ಲಿ ಸಭೆಯನ್ನು ಕರೆದಿದ್ದರು.

2019,ಆ.4ರಂದು ಫಾರೂಕ್ ಅವರ ಗುಪ್ಕರ್ ರೋಡ್ ನಿವಾಸದಲ್ಲಿ ಗುಪ್ಕರ್ ಘೋಷಣೆಗೆ ಸಹಿ ಮಾಡಲಾಗಿತ್ತು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರಕ್ಷಿಸಲು ಮತ್ತು ಅದನ್ನು ದುರ್ಬಲಗೊಳಿಸುವ ಯಾವುದೇ ಹೆಜ್ಜೆಯ ವಿರುದ್ಧ ಹೋರಾಡಲು ಪ್ರಾದೇಶಿಕ ಪಕ್ಷಗಳು ಮತ್ತು ಕಾಂಗ್ರೆಸ್ ಈ ನಿರ್ಣಯವನ್ನು ಅಂಗೀಕರಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News