ಬೈಂದೂರು : ಓಮ್ನಿ ಕಾರನ್ನು ಬೆನ್ನಟ್ಟಿದ ಪೊಲೀಸ್ ಜೀಪು ಅಪಘಾತ

Update: 2020-10-16 06:55 GMT

ಬೈಂದೂರು, ಅ.16: ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಾಹನವನ್ನು ಬೆನ್ನಟ್ಟಿದ ಪೊಲೀಸ್ ಜೀಪೊಂದು ಪಲ್ಟಿಯಾದ ಪರಿಣಾಮ ಬೈಂದೂರು ವೃತ್ತ ನಿರೀಕ್ಷಕ ಸಹಿತ ಇಬ್ಬರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ಬೈಂದೂರು ಸಮೀಪದ ಒತ್ತಿನೆಣೆ ಎಂಬಲ್ಲಿ ನಡೆದಿದೆ.

ಗಾಯಗೊಂಡಿರುವ ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ಜಿ.ನಾಯ್ಕ್ ಮತ್ತು ಜೀಪು ಚಾಲಕ ಹೇಮರಾಜ್ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ವೃತ್ತ ನಿರೀಕ್ಷಕ ಗೋಪುಕೃಷ್ಣ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಬೈಂದೂರಿನಲ್ಲಿ ಗಸ್ತು ತಿರುಗಾಡುತ್ತಿದ್ದ ವೃತ್ತ ನಿರೀಕ್ಷಕ ಸುರೇಶ್ ನಾಯಕ್, ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಾರುತಿ ಓಮ್ನಿ ಕಾರನ್ನು ಗಮನಿಸಿದರು. ಕಾರನ್ನು ಹಿಂಬಾಳಿಸಿದಾಗ ಅದರಲ್ಲಿದ್ದವರು ಪರಾರಿಯಾಗಲು ಯತ್ನಿಸಿದರೆನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರಿನಿಂದ ಒತ್ತಿನೆಣೆ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರನ್ನು ಪೊಲೀಸ್ ಜೀಪು ಬೆನ್ನಟ್ಟಿತು. ಈ ಸಂದರ್ಭ ರಾಘವೇಂದ್ರ ಮಠದ ಸಮೀಪ ನಿಯಂತ್ರಣ ತಪ್ಪಿದ ಜೀಪು ಪಲ್ಟಿಯಾಗಿದೆ. ಅಪಘಾತದಿಂದ ಜೀಪು ಸಂಪೂರ್ಣ ನಜ್ಜುಗುಜ್ಜಾಗಿದೆ. ಜೀಪಿನೊಳಗೆ ಸಿಲುಕಿದ ಅಧಿಕಾರಿ ಹಾಗೂ ಚಾಲಕನನ್ನು ಹೊರ ತೆಗೆಯಲು ಹರಸಾಹಸ ಪಡಲಾಯಿತು. ಸುಮಾರು 2.15ರ ಸುಮಾರಿಗೆ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಯಿತೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News