ನೀಟ್ ಫಲಿತಾಂಶ ಪ್ರಕಟ: 720ಕ್ಕೆ 720 ಅಂಕ ಗಳಿಸಿ ದಾಖಲೆ ನಿರ್ಮಿಸಿದ ಶೋಯೆಬ್ ಅಫ್ತಾಬ್

Update: 2020-10-16 14:44 GMT

ಹೊಸದಿಲ್ಲಿ,ಅ.16: ವೈದ್ಯಕೀಯ ಪದವಿ ಕಾಲೇಜುಗಳಿಗೆ ಪ್ರವೇಶಕ್ಕಾಗಿನ 2020ರ ಸಾಲಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ ( ನೀಟ್)ಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಸೆಪ್ಟೆಂಬರ್ 13 ಹಾಗೂ ಅಕ್ಟೋಬರ್ 14ರಂದು ನೀಟ್ ಪರೀಕ್ಷೆಯನ್ನು ನಡೆಸಲಾಗಿತ್ತು.

2020ರ ಸಾಲಿನ ನೀಟ್ ಪರೀಕ್ಷೆಯಲ್ಲಿ ಒಡಿಶಾದ ಶೋಯೆಬ್ ಅಫ್ತಾಬ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅವರು 720ಕ್ಕೆ 720 ಅಂಕಗಳನ್ನು ಪಡೆಯುವ ಮೂಲಕ ಶೇ.100ರಷ್ಟು ಸಾಧನೆ ಮಾಡಿದ್ದಾರೆ.

  ಇದೀಗ ವಿದ್ಯಾರ್ಥಿಗಳು ಪಡೆದಿರುವ ಅಂಕಗಳ ಆಧಾರದಲ್ಲಿ ಅಖಿಲ ಭಾರತ ಮಟ್ಟದ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

 ಈ ವರ್ಷ 15.97 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಸೆಪ್ಟೆಂಬರ್ 13ರಂದು ನಡೆದ ಪರೀಕ್ಷೆಗಳಲ್ಲಿ ಅವರ ಪೈಕಿ ಶೇ.85-90ರಷ್ಟು ಮಂದಿ ಮಾತ್ರವೇ ಹಾಜರಾಗಿದ್ದರು. ಆದಾಗ್ಯೂ ಕೋವಿಡ್-19 ಸಾಂಕ್ರಾಮಿಕ ಕಾರಣದಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಅಕ್ಟೋಬರ್ 14ರಂದು ನಡೆದ ಎರಡನೆ ಹಂತದ ನೀಟ್ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿದೆ.

www.ntaneet.nic.in.ನೀಟ್ ಪರೀಕ್ಷೆಗೆ ಹಾಜರಾದವಿದ್ಯಾರ್ಥಿಗಳು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯ ಅಧಿಕೃತ ವೆಬ್‌ಸೈಟ್ ನಲ್ಲಿ ತಮ್ಮ ಫಲಿತಾಂದ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

  ನೀಟ್ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತಾವು ಪಡೆದ ಅಂಕಗಳ ಆಧಾರದಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕೆ ಅರ್ಹತೆಯನ್ನು ಪಡೆಯಲಿದ್ದಾರೆ. ಅರ್ಹ ಅಭ್ಯರ್ಥಿಗಳ ಕೌನ್ಸೆಲಿಂಗ್‌ನ ವಿವರಗಳನ್ನು ಶೀಘ್ರವೇ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಪ್ರಕಟಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News