ಹೆಣ್ಣು ಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು ಪರಿಷ್ಕರಿಸುವ ಬಗ್ಗೆ ಶೀಘ್ರ ನಿರ್ಧಾರ: ಪ್ರಧಾನಿ

Update: 2020-10-16 17:48 GMT

ಹೊಸದಿಲ್ಲಿ, ಅ. 16:  ಹೆಣ್ಣು ಮಕ್ಕಳ ವಿವಾಹದ ಕನಿಷ್ಠ ವಯಸ್ಸಿನ ಬಗ್ಗೆ ಅಧ್ಯಯನ ನಡೆಸಲು ರಚನೆಯಾದ ಸಮಿತಿಯಿಂದ ವರದಿ ಬಂದ ನಂತರ ವಿವಾಹದ ಕನಿಷ್ಠ ವಯಸ್ಸನ್ನು ಪರಿಷ್ಕರಿಸುವ ಬಗ್ಗೆ ಕೇಂದ್ರ ಸರಕಾರ ಶೀಘ್ರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ)ಯ 75ನೇ ವರ್ಷಾಚರಣೆಯ ನೆನಪಿಗಾಗಿ 75 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆಗೊಳಿಸಿದ ಬಳಿಕ ಅವರು ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು.

ಕಳೆದ 6 ವರ್ಷಗಳಿಂದ ಸರಕಾರ ತೆಗೆದುಕೊಂಡ ಮಹತ್ವದ ಕ್ರಮಗಳ ಪರಿಣಾಮ ದೇಶದಲ್ಲಿ ಮೊದಲ ಬಾರಿ ಶಿಕ್ಷಣದ ದಾಖಲಾತಿ ಅನುಪಾತದಲ್ಲಿ ಬಾಲಕರಿಗಿಂತ ಬಾಲಕಿಯರೇ ಹೆಚ್ಚಾಗಿದ್ದಾರೆ ಎಂದು ಅವರು ತಿಳಿಸಿದರು. ಹೆಣ್ಣು ಮಕ್ಕಳ ವಿವಾಹದ ಕನಿಷ್ಠ ವಯಸ್ಸು ಎಷ್ಟಾಗಿರಬೇಕು ಎಂದು ನಿರ್ಧರಿಸಲು ಚರ್ಚೆ ನಡೆಯುತ್ತಿದೆ. ಇದಕ್ಕಾಗಿ ಸಮಿತಿ ರಚನೆಯಾಗಿದೆ. ಸಮಿತಿಯ ವರದಿ ಬಗ್ಗೆ ದೇಶಾದ್ಯಂತ ಹೆಣ್ಣು ಮಕ್ಕಳು ಪತ್ರ ಬರೆದು ವಿಚಾರಿಸುತ್ತಿದ್ದಾರೆ. ಸಮಿತಿಯ ವರದಿ ಬಂದ ಬಳಿಕ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಪ್ರಧಾನಿ ತಿಳಿಸಿದರು.

ಅ. 15ರಂದು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಕೂಡ ಪ್ರಧಾನಿ ಅವರು ಈ ವಿಚಾರ ತಿಳಿಸಿದ್ದರು. ಹೆಣ್ಣು ಮಕ್ಕಳ ವಿವಾಹದ ಕನಿಷ್ಠ ವಯಸ್ಸು ಎಷ್ಟಾಗಿರಬೇಕು ಎಂಬುದರ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದರು. ಸದ್ಯ ವಿವಾಹದ ಕನಿಷ್ಠ ವಯಸ್ಸು ಹೆಣ್ಣು ಮಕ್ಕಳಿಗೆ 18 ಹಾಗೂ ಗಂಡು ಮಕ್ಕಳಿಗೆ 21.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News