ಅತ್ಯಾಚಾರ ವಿರೋಧಿಸಿದ್ದಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿ: ಬಾಲಕಿ ಮೃತ್ಯು

Update: 2020-10-16 17:51 GMT

ಹೈದರಾಬಾದ್, ಅ.16: ತೆಲಂಗಾಣದ ಖಮ್ಮನ್ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಯತ್ನವನ್ನು ವಿರೋಧಿಸಿದ್ದ ಮನೆಕೆಲಸದ ಬಾಲಕಿಯ ಮೇಲೆ ಮಾಲಕ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸೆಪ್ಟಂಬರ್ 18ರಂದು ಈ ಘಟನೆ ನಡೆದಿತ್ತು. ತೆಲಂಗಾಣದ ಮುಸ್ತಫ ನಗರದ ನಿವಾಸಿ ವಿವಾಹಿತ ವ್ಯಕ್ತಿ ಅಲ್ಲಂ ಮರೈಯ ಎಂಬಾತ ಆರೋಪಿಯಾಗಿದ್ದಾನೆ. ಮನೆಯಲ್ಲಿ ಕೆಲಸಕ್ಕಿದ್ದ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದಾಗ ಆಕೆ ತಡೆದಿದ್ದು ಆಗ ಮರೈಯ ಬಾಲಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದ. ಸುಟ್ಟ ಗಾಯಕ್ಕೆ ಒಳಗಾಗಿದ್ದ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು ಆಕಸ್ಮಿಕವಾಗಿ ಬೆಂಕಿ ತಗುಲಿದೆ ಎಂದು ಆಸ್ಪತ್ರೆಯಲ್ಲಿ ತಿಳಿಸಿದ್ದ ಎನ್ನಲಾಗಿದೆ. ಆದರೆ ಬಾಲಕಿಯ ಆರೋಗ್ಯಸ್ಥಿತಿ ಗಂಭೀರವಾದ ಬಳಿಕ ವಿಷಯ ಬೆಳಕಿಗೆ ಬಂದಿದೆ. ಅದರಂತೆ ಅಕ್ಟೋಬರ್ 4ರಂದು ಪೊಲೀಸರಲ್ಲಿ ದೂರು ನೀಡಲಾಗಿದೆ.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಾಲಕಿಯ ಹೆತ್ತವರನ್ನು ಸಂಪರ್ಕಿಸಿದಾಗಲೇ ಅವರಿಗೆ ಪುತ್ರಿಯ ಆರೋಗ್ಯಸ್ಥಿತಿ ಗಂಭೀರವಾಗಿರುವುದು ತಿಳಿದಿದೆ. ಆರೋಪಿಯ ವಿರುದ್ಧ ಐಪಿಸಿ 302 ಸೆಕ್ಷನ್ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಖಮ್ಮನ್ ಪೊಲೀಸ್ ಆಯುಕ್ತ ತೌಸೀಫ್ ಇಕ್ಬಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News