×
Ad

ಬೆಳೆ ತ್ಯಾಜ್ಯ ದಹನದ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿ ನೇಮಕ

Update: 2020-10-16 23:21 IST

ಹೊಸದಿಲ್ಲಿ, ಅ. 16: ದಿಲ್ಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ನಡುವೆ ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶದಲ್ಲಿ ಬೆಳೆ ತ್ಯಾಜ್ಯ ದಹನದ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಅವರನ್ನು ಸುಪ್ರೀಂಕೋರ್ಟ್ ಶುಕ್ರವಾರ ನಿಯೋಜಿಸಿದೆ.

‘‘ದಿಲ್ಲಿ ಹಾಗೂ ಎನ್‌ಸಿಆರ್‌ನ ನಾಗರಿಕರು ಶುದ್ಧ ವಾಯು ಉಸಿರಾಡಲು ಸಾಧ್ಯವಾಗುವ ಕುರಿತು ಮಾತ್ರ ನಾವು ಚಿಂತಿಸಿದ್ದೇವೆ’’ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನಿವೃತ್ತ ನ್ಯಾಯಮೂರ್ತಿ ಲೋಕೂರ್ ಅವರ ಏಕ ಸದಸ್ಯ ಸಮಿತಿ ನಿಯೋಜಿಸುವುದನ್ನು ಪರಿಗಣಿಸಬೇಕೆಂಬ ಕೇಂದ್ರ ಸರಕಾರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 26ರಂದು ನಡೆಯಲಿದೆ. ಬೆಳೆ ತ್ಯಾಜ್ಯ ದಹಿಸುವ ಹೊಲಗಳ ಭೌತಿಕ ಮೇಲ್ವಿಚಾರಣೆಗೆೆ ಲೋಕೂರು ಸಮಿತಿಗೆ ನೆರವು ನೀಡುವಂತೆ ನ್ಯಾಯಾಲಯ ನಿಯೋಜಿತ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಹಾಗೂ ಹರ್ಯಾಣ, ಪಂಜಾಬ್ ಹಾಗೂ ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠ ನಿರ್ದೇಶಿಸಿದೆ.

ಸಂಬಂಧಿತ ರಾಜ್ಯ ಸರಕಾರಗಳು ಸಮಿತಿಗೆ ಕಾರ್ಯದರ್ಶಿ, ರಕ್ಷಣೆ ಹಾಗೂ ಹಣಕಾಸು ಸೌಲಭ್ಯಗಳನ್ನು ಒದಗಿಸಲಿದೆ. ಸಮಿತಿಗೆ ನೆರವು ನೀಡಲು ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಭಾರತ್ ಸ್ಕೌಟ್ ಅನ್ನು ನಿಯೋಜಿಸಲಿದೆ. ಸಮಿತಿ ತನ್ನ ವರದಿಯನ್ನು 15 ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಹ್ಮಣೀಯನ್ ಒಳಗೊಂಡ ನ್ಯಾಯಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News