ಯಾತ್ರಿಗಳಿಗೆ ಬಾಗಿಲು ತೆರೆದ ಶಬರಿಮಲೆ ದೇವಾಲಯ: ದರ್ಶನಕ್ಕೆ ಈ ಪ್ರಮಾಣಪತ್ರಗಳು ಕಡ್ಡಾಯ
ಹೊಸದಿಲ್ಲಿ, ಅ. 16: ಕೊರೋನ ಸಾಂಕ್ರಾಮಿಕ ರೋಗ ಹರಡದಂತೆ ಘೋಷಿಸಲಾಗಿದ್ದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಚ್ಚಿದ್ದ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯ ತುಲಾ ತಿಂಗಳ ಐದು ದಿನಗಳ ಪ್ರಾರ್ಥನೆಗಾಗಿ ಯಾತ್ರಿಗಳಿಗೆ ಶುಕ್ರವಾರ ತೆರೆದಿದೆ. ಶಬರಿಮಲೆ ದೇವಾಸ್ಥಾನಕ್ಕೆ ತೆರಳಲು ಪ್ರತಿದಿನ 250 ಯಾತ್ರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಇದಕ್ಕಾಗಿ ಯಾತ್ರಿಗಳು ರಾಜ್ಯ ಸರಕಾರದ ಆನ್‌ಲೈನ್ ವ್ಯವಸ್ಥೆಯಲ್ಲಿ ಮುಂಗಡ ಕಾಯ್ದಿರಿಸಬೇಕು. ನೋಂದಣಿಯಾದ ಯಾತ್ರಿಗಳು ಬೆಟ್ಟ ತಲುಪುವುದಕ್ಕಿಂತ 48 ಗಂಟೆಗಳ ಮುನ್ನ ಕೊರೋನ ನೆಗೆಟಿವ್ ಪ್ರಮಾಣಪತ್ರ ಪಡೆದಿರಬೇಕು. ಅಲ್ಲದೆ, ಬೆಟ್ಟ ಏರಲು ಅರ್ಹರಾಗಿದ್ದಾರೆ ಎಂದು ವೈದ್ಯರಿಂದ ವೈದ್ಯಕೀಯ ಅರ್ಹತಾ ಪ್ರಮಾಣ ಪತ್ರ ಪಡೆದಿರಬೇಕು 10 ವರ್ಷದ ಕೆಳಗಿನ ಹಾಗೂ 60 ವರ್ಷ ಮೇಲಿನ ಯಾತ್ರಿಗಳಿಗೆ ದೇವಾಲಯ ಪ್ರವೇಶ ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
‘‘ಕೊರೋನ ಶಿಷ್ಟಾಚಾರದ ಹಿನ್ನೆಲೆಯಲ್ಲಿ 10 ಹಾಗೂ 60ರ ನಡುವಿನ ಪ್ರಾಯ ಗುಂಪಿನ ಯಾತ್ರಿಗಳಿಗೆ ಮಾತ್ರ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ತೆರಳುವ ಅವಕಾಶ ನೀಡಲಾಗಿದೆ. ಯಾತ್ರಿಗಳು ಮಾಸ್ಕ್, ಕೈಗವಸು ಹಾಗೂ ಸ್ಯಾನಿಟೈಸರ್ ತರಬೇಕು. ಮಾಸ್ಕ್ ಧರಿಸಿ ಬೆಟ್ಟ ಹತ್ತಲು ಕಷ್ಟವಾಗುವ ಯಾತ್ರಿಗಳು ಮಾಸ್ಕ್ ಧರಿಸದೇ ಹತ್ತಬಹುದು. ಆದರೆ, ಉಳಿದ ಎಲ್ಲ ಸಂದರ್ಭಗಳಲ್ಲಿ ಮಾಸ್ಕ್ ಧರಿಸಲೇ ಬೇಕು. ಯಾತ್ರಿಗಳು ಗುಂಪಾಗಿ ಸಂಚರಿಸಲು ಅವಕಾಶ ಇಲ್ಲ. ದೇವಾಲಯ ಪ್ರವೇಶಿಸುವ ಸಂದರ್ಭ ಯಾತ್ರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು’’ ಎಂದು ಅವರು ಹೇಳಿದ್ದಾರೆ.
ಪದ್ಧತಿಯಂತೆ ಪಂಪಾದಲ್ಲಿ ಸ್ನಾನ ಮಾಡಲು ಯಾತ್ರಿಗಳಿಗೆ ಅವಕಾಶ ಇಲ್ಲ. ಇದಕ್ಕೆ ಬದಲು ಪಂಬಾದಲ್ಲಿ ಸ್ನಾನಕ್ಕಾಗಿ ಪ್ರತ್ಯೇಕ ಸಾಬೂನು, ಸ್ಯಾನಿಟೈಸರ್ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಯಾತ್ರಿಗಳು ಅಸ್ವಸ್ಥರಾದರೆ ಚಿಕಿತ್ಸೆ ನೀಡಲು ನೀಲಕ್ಕಲ್, ಪಂಪಾ ಹಾಗೂ ಸನ್ನಿಧಾನಂನಲ್ಲಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ. ಇಲ್ಲಿಗೆ ಅಗತ್ಯ ಇರುವ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಮುಖ ಪ್ರವೇಶ ಮಾರ್ಗ ಹೊರತುಪಡಿಸಿ ಉಳಿದೆಲ್ಲ ಮಾರ್ಗಗಳನ್ನು ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.