×
Ad

ಎಲ್‌ಎಸಿಯಲ್ಲಿ ಚೀನಿ ಪಡೆಗಳ ಉಪಸ್ಥಿತಿಯಿಂದ ಭಾರತಕ್ಕೆ ಗಂಭೀರವಾದ ಭದ್ರತಾ ಬೆದರಿಕೆ: ಕೇಂದ್ರ ಸಚಿವ ಎಸ್.ಜೈಶಂಕರ್

Update: 2020-10-16 23:44 IST

ಹೊಸದಿಲ್ಲಿ,ಅ.16: ಲಡಾಕ್ ವಲಯದಲ್ಲಿನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಭಾರೀ ಸಂಖ್ಯೆಯ ಚೀನಿ ಸೈನಿಕರ ಉಪಸ್ಥಿತಿಯು, ಭಾರತದ ಭದ್ರತೆಗೆ ಗಂಭೀರವಾದ ಬೆದರಿಕೆಯಾಗಿದೆ ಹಾಗೂ ಕಳೆದ 30 ವರ್ಷಗಳಿಂದ ನಿರ್ಮಿತವಾಗಿದ್ದ ಉಭಯದೇಶಗಳ ಬಾಂಧವ್ಯವನ್ನು ಕದಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶುಕ್ರವಾರ ತಿಳಿಸಿದ್ದಾರೆ.

 ಏಶ್ಯಾ ಸೊಸೈಟಿ ಆಯೋಜಿಸಿದ್ದ ಭಾರತ ಎದುರಿಸುತ್ತಿರುವ ಜಾಗತಿಕ ಸವಾಲುಗಳ ಕುರಿತಾದ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದ ಅವರು ಮಾತನಾಡುತ್ತಿದ್ದರು.

 ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ‘ದುರಂತಮಯ’ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾದ ಘಟನೆಯನ್ನು ಪ್ರಸ್ತಾವಿಸಿದ ಅವರು ‘‘ಲಡಾಕ್‌ನಲ್ಲಿ ಏರ್ಪಟ್ಟಿರುವ ಸೈನಿಕ ಸಂಘರ್ಷಾವಸ್ಥೆಯು ಸಾರ್ವಜನಿಕರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಅಲ್ಲದೆ ಮಹತ್ವದ ರಾಜಕೀಯ ಪರಿಣಾಮವನ್ನು ಕೂಡಾ ಉಂಟು ಮಾಡಿದೆ. ಎರಡು ದೇಶಗಳ ಬಾಂಧವ್ಯವನ್ನು ಅದು ತೀವ್ರವಾಗಿ ಕದಡಿದೆ’’ ಎಂದು ಅವರು ಹೇಳಿದರು.

‘‘ಲಡಾಕ್‌ನಲ್ಲಿ ಸೇನಾ ಉದ್ವಿಗ್ನತೆಗೆ ಸಂಬಂಧಿಸಿ ಚೀನಾದಿಂದ ತನಗೆ ಈವರೆಗೆ ಯೋಗ್ಯವಾದ ವಿವರಣೆ ಲಭಿಸಿಲ್ಲವೆಂದು’’ ಜೈಶಂಕರ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ 2018ರಲ್ಲಿ ಚೀನಾದ ವುಹಾನ್‌ ನಲ್ಲಿ ಹಾಗೂ 2019ರಲ್ಲಿ ತಮಿಳುನಾಡಿನ ಮಾಮಲ್ಲಪುರಂನಲ್ಲಿ ನಡೆದ ಔಪಚಾರಿಕ ಶೃಂಗಸಭೆಗಳು ಉಭಯ ನಾಯಕರಿಗೆ ತಮ್ಮ ಕಾಳಜಿಯ ವಿಷಯಗಳ ಬಗ್ಗೆ ನೇರವಾಗಿ ಮಾತನಾಡಲು ಅವಕಾಶವನ್ನು ಒದಗಿಸಿತ್ತೆಂದು ಜೈಶಂಕರ್ ಹೇಳಿದರು.

 ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಚರ್ಚಾಕೂಟದಲ್ಲಿ ಆಸ್ಟ್ರೇಲಿಯದ ಮಾಜಿ ಪ್ರಧಾನಿ ಕೆವಿನ್ ರುಡ್ಡಿ ಕೂಡಾ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News