ಮತ ವಿಭಜಕ ಎಲ್‌ಜೆಪಿ ಜತೆ ಮೈತ್ರಿ ಇಲ್ಲ: ಬಿಜೆಪಿ

Update: 2020-10-17 04:05 GMT
 ಪ್ರಕಾಶ್ ಜಾವಡೇಕರ್

ಪಾಟ್ನಾ, ಅ.17: "ನನ್ನ ಎದೆ ಸೀಳಿದರೆ ಒಳಗೆ ಮೋದಿ ಇದ್ದಾರೆ" ಎಂದು ಲೋಕ ಜನಶಕ್ತಿ ಪಕ್ಷದ ಮುಖಂಡ ಚಿರಾಗ್ ಪಾಸ್ವಾನ್ ಹೇಳಿಕೆ ನೀಡಿದ ಬೆನ್ನಲ್ಲೇ, "ಎಲ್‌ಜೆಪಿ ಮತವಿಭಜಕ. ಆ ಪಕ್ಷದ ಜತೆ ಯಾವುದೇ ರೀತಿಯ ಮೈತ್ರಿ ಇಲ್ಲ" ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಬಿಜೆಪಿ ಹಿರಿಯ ಮುಖಂಡರ ಜತೆ ತಮ್ಮ ಸಂಬಂಧವನ್ನು ಬಿಂಬಿಸಿಕೊಳ್ಳುವ ಮೂಲಕ ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚಿರಾಗ್ ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ. ಕಳೆದ ಕೆಲ ದಿನಗಳಿಂದ ಬಿಜೆಪಿ ಹಾಗೂ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಿರಿಯ ಮುಖಂಡರನ್ನು ಪಾಸ್ವಾನ್ ಹೊಗಳುತ್ತಿದ್ದಾರೆ. ಆದರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಚಿರಾಗ್ ಹೇಳಿಕೆ, ಚುನಾವಣೆಯಲ್ಲಿ ಎಲ್‌ಜೆಪಿ ಹಾಗೂ ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ ಎಂಬ ಸಂದೇಹ ಮೂಡಿಸಿತ್ತು.

"ಎಲ್‌ಜೆಪಿ ಜತೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ. ಗೊಂದಲ ಹರಡುವ ರಾಜಕೀಯವನ್ನು ನಾವು ಇಷ್ಟಪಡುವುದಿಲ್ಲ" ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.

ಮತ ವಿಭಜನೆಯಷ್ಟೇ ಎಲ್‌ಜೆಪಿಯ ಉದ್ದೇಶ. ಮೂರು ಹಂತದ ಚುನಾವಣೆಯಲ್ಲಿ ಪಕ್ಷ ಯಾವುದೇ ಪರಿಣಾಮ ಬೀರಲಾರದು. ಬಿಜೆಪಿಯಲ್ಲಿ ಯಾವುದೇ ಬಿ, ಸಿ ಅಥವಾ ಡಿ ಟೀಮ್ ಇಲ್ಲ ಎಂದು ಹೇಳಿದರು. ಬಿಜೆಪಿ, ಜೆಡಿಯು, ಜಿತನ್‌ರಾಂ ಮಾಂಜಿಯವರ ಎಚ್‌ಎಎಂ(ಎಸ್) ಮತ್ತು ವಿಕಾಸಶೀಲ ಇನ್ಸಾನ್ ಪಾರ್ಟಿ ಚುನಾವಣೆಯಲ್ಲಿ ನಾಲ್ಕನೇ ಮೂರರಷ್ಟು ಬಹುಮತ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News