ವರದಿಗಾರಿಕೆಗೆ ತೆರಳಿದ್ದ 'ಕಾರವಾನ್' ಪತ್ರಕರ್ತನನ್ನು ವಶಕ್ಕೆ ಪಡೆದು ಹಲ್ಲೆಗೈದ ಪೊಲೀಸರು: ಆರೋಪ

Update: 2020-10-17 08:56 GMT
Photo: Twitter(@thecaravanindia)

ಹೊಸದಿಲ್ಲಿ : 'ದಿ ಕಾರವಾನ್ ಮ್ಯಾಗಝಿನ್‍' ಗೆ ಕೆಲಸ ಮಾಡುವ ಪತ್ರಕರ್ತರೊಬ್ಬರನ್ನು ಉತ್ತರ ದಿಲ್ಲಿಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ತಮ್ಮ ವಶಕ್ಕೆ ಪೊಲೀಸರು ಪಡೆದುಕೊಂಡಿದ್ದೇ ಅಲ್ಲದೆ ಅವರ ಮೇಲೆ ಹಿರಿಯ ಅಧಿಕಾರಿಯೊಬ್ಬರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಹದಿನಾಲ್ಕು ವರ್ಷದ ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳನ್ನು ವರದಿ ಮಾಡಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ಕುರಿತಂತೆ 'ದಿ ಕಾರವಾನ್' ಟ್ವೀಟ್ ಮಾಡಿದ್ದು, ತನ್ನ ಪತ್ರಕರ್ತ ಆಹನ್ ಪೆನ್ಕರ್ ಅವರನ್ನು ಎಸಿಪಿ ಅಜಯ್ ಕುಮಾರ್ ಅವರು ತುಳಿದು ಅವರಿಗೆ ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಕಪಾಳಮೋಕ್ಷಗೈದಿದ್ದಾರೆ. ತಾನೊಬ್ಬ ಪತ್ರಕರ್ತನೆಂದು ಹೇಳಿ ತನ್ನ ಗುರುತು ಕಾರ್ಡ್ ಅನ್ನು ತೋರಿಸಿದರೂ ಪೊಲೀಸರು ಹಲ್ಲೆ ಮುಂದುವರಿಸಿದ್ದರು ಎಂದು ಕಾರವಾನ್ ಆರೋಪಿಸಿದೆ.

ವಿದ್ಯಾರ್ಥಿಗಳು ಹಾಗೂ ಹೊರಾಟಗಾರರು ಮಾಡೆಲ್ ಟೌನ್ ಪೊಲೀಸ್ ಠಾಣೆಯ ಹೊರಗೆ ನಿಂತು ಪ್ರತಿಭಟನೆ ನಡೆಸಿ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸುವಂತೆ ಆಗ್ರಹಿಸುತ್ತಿದ್ದುದನ್ನು ವರದಿ ಮಾಡಲು ಪೆನ್ಕರ್ ಅಲ್ಲಿಗೆ ತೆರಳಿದ್ದರು.

ಅವರ ಬೆನ್ನಿಗಾಗಿರುವ ಗಾಯಗಳ ಚಿತ್ರವನ್ನು ಕಾರವಾನ್ ಪೋಸ್ಟ್ ಮಾಡಿದೆ.  ಈ ಹಲ್ಲೆ ಕುರಿತು ದಿಲ್ಲಿ ಪೊಲೀಸ್ ಆಯುಕ್ತ ಎಸ್ ಎನ್ ಶ್ರೀವಾಸ್ತವ ಅವರಿಗೆ ದೂರು ನೀಡಲಾಗಿದೆ.  ಪೊಲೀಸರು ತನ್ನನ್ನು ಬಲವಂತವಾಗಿ ಠಾಣೆಗೊಯ್ದು ತನ್ನ ಮೊಬೈಲ್ ಫೋನ್ ಪಡೆದು ಅದರಲ್ಲಿ ಅವರು ತೆಗೆದಿದ್ದ ಘಟನೆಯ ವೀಡಿಯೊಗಳನ್ನು ಡಿಲೀಟ್ ಮಾಡಿದರಲ್ಲದೆ ಬೆದರಿಕೆಯನ್ನೂ ಒಡ್ಡಿದ್ದರು, ಎಸಿಪಿ ಅಜಯ್ ಕುಮಾರ್ ರಾಡ್ ಬಳಸಿ ಹಲ್ಲೆ ನಡೆಸಿದ್ದಾರೆ ಠಾಣೆಯಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ಹಾಗೂ ಸಿಖ್ ಹುಡುಗನಿಗೂ ಪೊಲೀಸರು ಹಲ್ಲೆಗೈಯ್ಯುತ್ತಿರುವುದನ್ನು ಕಂಡಿದ್ದಾಗಿ ಪೆನ್ಕರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News