ಚೀನಾದ ಕ್ಸಿನ್ಜಿಯಾಂಗ್‍ನಲ್ಲಿ ನರಮೇಧಕ್ಕೆ ಹತ್ತಿರವಾಗಿರುವ ಏನೋ ನಡೆಯುತ್ತಿದೆ: ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ

Update: 2020-10-17 11:39 GMT
ರಾಬಟ್ ಒ'ಬ್ರಿಯನ್ (Photo: twitter)

ವಾಷಿಂಗ್ಟನ್ : "ನರಮೇಧವಲ್ಲದೇ ಆಗಿದ್ದರೂ ಅದಕ್ಕೆ ಹತ್ತಿರವಾಗಿದ್ದು ಏನೋ ಕ್ಸಿನ್ಜಿಯಾಂಗ್‍ನಲ್ಲಿ ನಡೆಯುತ್ತಿದೆ,'' ಎಂದು ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಚೀನಾ ಉಯಿಘರ್ ಮುಸ್ಲಿಮರನ್ನು ದಿಗ್ಬಂಧನದಲ್ಲಿರಿಸಿ ಅವರಿಗೆ ಕಿರುಕುಳ ನೀಡುತ್ತಿದೆ ಎಂಬ ವ್ಯಾಪಕ ಟೀಕೆಗಳ ಕುರಿತಂತೆ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬಟ್ ಒ'ಬ್ರಿಯನ್ ಹೇಳಿದ್ದಾರೆ.

ಎಸ್ಪೆನ್ ಇನ್‍ಸ್ಟಿಟ್ಯೂಟ್ ಆಯೋಜಿಸಿದ್ದ ಆನ್‍ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಉಯಿಘರ್ ಮಹಿಳೆಯರ ತಲೆಗಳನ್ನು ವಸ್ತುಶಃ ಬೋಳಿಸುತ್ತಿರುವ ಚೀನೀಯರು ಅವರ ಕೂದಲುಗಳ ಉತ್ಪನ್ನ ತಯಾರಿಸಿ ಅವುಗಳನ್ನು ಅಮೆರಿಕಾಗೆ ಕಳುಹಿಸುತ್ತಿದ್ದಾರೆ,'' ಎಂದು ಹೇಳಿದರಲ್ಲದೆ ಈ ಮೂಲಕ  ಕ್ಸಿನ್ಜಿಯಾಂಗ್‍ನಲ್ಲಿ ಮನುಷ್ಯರ ತಲೆಗೂದಲು ಬಳಸಿ ತಯಾರಿಸಲಾದ ಬೃಹತ್ ಸಂಖ್ಯೆಯ ಉತ್ಪನ್ನಗಳನ್ನು ಅಮೆರಿಕಾದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆಯನ್ನು ಉಲ್ಲೇಖಿಸಿದ್ದಾರೆ.

ಚೀನಾದ ಕ್ಸಿನ್ಜಿಯಾಂಗ್‍ನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮುಸ್ಲಿಮರನ್ನು ದಿಗ್ಬಂಧನದಲ್ಲಿರಿಸಲಾಗಿದೆ ಹಾಗೂ ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅಮೆರಿಕಾ ಈಗಾಗಲೇ ಹೇಳಿದೆ.

ಕ್ಸಿನ್ಜಿಯಾಂಗ್ ನಲ್ಲಿ ಚೀನಾ ಮುಸ್ಲಿಮರಿಗೆ ಬಲವಂತವಾಗಿ ಸಂತಾನಹರಣ ಶಸ್ತ್ರಕ್ರಿಯೆ ನಡೆಸುತ್ತಿದೆ, ಬಲವಂತದ ಗರ್ಭಪಾತ ನಡೆಸುತ್ತಿದೆ ಎಂದು ಅಮೆರಿಕಾದ ಸೆಕ್ರಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೋ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News