ನ್ಯೂಝಿಲ್ಯಾಂಡ್ ಚುನಾವಣೆ: ಪ್ರಧಾನಿ ಜಸಿಂಡಾಗೆ ಭರ್ಜರಿ ಜಯ

Update: 2020-10-17 17:47 GMT

ಆಕ್‌ಲ್ಯಾಂಡ್,ಅ.17: ದ್ವೀಪರಾಷ್ಟ್ರವಾದ ನ್ಯೂಝಿಲ್ಯಾಂಡ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜೆಸಿಂಡಾ ಆರ್ಡೆನ್ ನೇತೃತ್ವದ ಲೇಬರ್ ಪಕ್ಷವು ಭರ್ಜರಿ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕೋವಿಡ್-19 ವಿರುದ್ಧ ಜೆಸಿಂಡಾ ಆರ್ಡೆನ್ ಸರಕಾರದ ಯಶಸ್ವಿ ಹೋರಾಟವು, ಈ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

    ಶನಿವಾರ ಸಂಜೆಯ ತನಕ ಮೂರನೆ ಎರಡರಷ್ಟು ಮತಗಳ ಎಣಿಕೆಯಾಗಿದ್ದು, ಆರ್ಡೆನ್ ನೇತೃತ್ವದ ಸೌಮ್ಯವಾದಿ ಎಡಪಂಥೀಯ ಲೇಬರ್ ಪಕ್ಷವು 49.2 ಶೇಕಡ ಮತಗಳನ್ನು ಪಡೆದುಕೊಂಡಿದೆ. 120 ಸದಸ್ಯಬಲದ ನ್ಯೂಝಿಲ್ಯಾಂಡ್ ಸಂಸತ್‌ನ 64 ಸೀಟುಗಳು ಲೇಬರ್ ಪಕ್ಷದ ಪಾಲಾಗಲಿದೆಯೆಂದು ನಿರೀಕ್ಷಿಸಲಾಗಿದೆ.

 ಪ್ರತಿಪಕ್ಷವಾದ ನ್ಯಾಶನಲ್ ಪಾರ್ಟಿಯು ಸೋಲೊಪ್ಪಿಕೊಂಡಿದ್ದು, ಅದರ ನಾಯಕಿ ಜುಡಿತ್ ಕಾಲಿನ್ಸ್ ಅವರು ಜೆಸಿಂಡಾ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಜುಡಿತ್ ಕಾಲಿನ್ಸ್ ನೇತೃತ್ವದ ಸಂಪ್ರದಾಯವಾದಿ ನ್ಯಾಶನಲ್ ಪಾರ್ಟಿಗೆ 35 ಸೀಟುಗಳು ದೊರೆಯುವುದೆಂದು ನಿರೀಕ್ಷಿಸಲಾಗಿದ್ದು, ಇದು ಕಳೆದ 20 ವರ್ಷಗಳಲ್ಲಿ ಆ ಪಕ್ಷದ ಕಳಪೆ ಸಾಧನೆಯಾಗಲಿದೆ.

 ‘ ಇದೊಂದು ಕೋವಿಡ್ ಚುನಾವಣೆ ’ಎಂದು ಆರ್ಡೆನ್ ಅವರು ಪ್ರಚಾರದ ಸಂದರ್ಭದಲ್ಲಿ ತಿಳಿಸಿದ್ದರು. ಕೊರೋನ ಸೋಂಕಿನ ಹರಡುವಿಕೆಯನ್ನು ಮೂಲೋತ್ಪಾಟನೆ ಮಾಡುವಲ್ಲಿ ತನ್ನ ಸರಕಾರ ಸಾಧಿಸಿದ್ದ ಅದ್ಭುತ ಯಶಸ್ಸನ್ನು ಅವರು ಚುನಾವಣಾ ಪ್ರಚಾರದಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದ್ದರು.

 ಕಳೆದ ವರ್ಷ ಕ್ರೈಸ್ಟ್‌ಚರ್ಚ್ ನಗರದ ಮಸೀದಿಗಳಲ್ಲಿ ಬಿಳಿಯ ಜನಾಂಗೀಯ ಶ್ರೇಷ್ಠತಾವಾದಿಯೊಬ್ಬ ಗುಂಡಿನ ದಾಳಿ ನಡೆಸಿ 51 ಮಂದಿಯನ್ನು ಹತ್ಯೆಗೈದ ಘಟನೆಯ ಬಳಿಕ ಅವರು ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ಭಾಗಿಯಾಗಿದ್ದು ಹಾಗೂ ನಾಗರಿಕರು ಗನ್‌ಗಳನ್ನು ಹೊಂದುವುದಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿದ್ದು, ಅವರ ಜನಪ್ರಿಯತೆಯನ್ನು ಇಮ್ಮಡಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News