ಐಸಿಸ್ ಪಿತೂರಿ ಪ್ರಕರಣ: 15 ಮಂದಿ ದೋಷಿಗಳಿಗೆ ಕಠಿಣ ಕಾರಾಗೃಹ ಶಿಕ್ಷೆ, ದಂಡ ವಿಧಿಸಿದ ಎನ್‌ಐಎ ನ್ಯಾಯಾಲಯ

Update: 2020-10-17 16:39 GMT

ಹೊಸದಿಲ್ಲಿ, ಅ. 17: ಐಸಿಸ್ ಪಿತೂರಿ ಪ್ರಕರಣದ 15 ಮಂದಿ ದೋಷಿಗಳಿಗೆ ದಿಲ್ಲಿಯ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ನ್ಯಾಯಾಲಯ 5ರಿಂದ 10 ವರ್ಷಗಳ ವರೆಗೆ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 38.000 ರೂ. ನಿಂದ 1.3 ಲಕ್ಷ ರೂ. ವರೆಗೆ ದಂಡ ವಿಧಿಸಿದೆ.

ಸಿರಿಯಾ ಮೂಲದ ಐಸಿಸ್ ಮಾಧ್ಯಮ ವರಿಷ್ಠ ಯೂಸುಫ್-ಅಲ್-ಹಿಂದಿ ಭಯೋತ್ಪಾದನೆ ಸಂಘಟನೆಗಾಗಿ ಕೆಲಸ ಮಾಡಲು ಹಾಗೂ ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಭಾರತೀಯ ಮುಸ್ಲಿಮರನ್ನು ನೇಮಕಗೊಳಿಸಿರುವುದಕ್ಕೆ ಈ ಪ್ರಕರಣ ಸಂಬಂಧಿಸಿದೆ. ಐಸಿಸ್ ಪಿತೂರಿ ಪ್ರಕರಣದ 15 ಮಂದಿ ದೋಷಿಗಳಿಗೆ ದಿಲ್ಲಿ ನ್ಯಾಯಾಲಯ ಶುಕ್ರವಾರ ಶಿಕ್ಷೆ ಘೋಷಿಸಿತು ಎಂದು ಎನ್‌ಐಎಯ ವಕ್ತಾರ ತಿಳಿಸಿದ್ದಾರೆ.

ವಿಶೇಷ ಎನ್‌ಐಎ ನ್ಯಾಯಾಲಯ ದೋಷಿಗಳಾದ ನಫೀಸ್ ಖಾನ್‌ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1,03,000 ರೂ. ದಂಡ, ಮುದಬ್ಬಿರ್ ಮುಷ್ತಾಕ್ ಶೇಖ್‌ಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 65,000 ರೂ. ದಂಡ, ಅಬು ಅನಾಸ್‌ಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 48,000 ರೂ. ದಂಡ, ಮುಫ್ತಿ ಅಬ್ದುಸ್ ಸಮಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ. ದಂಡ, ಅಝರ್ ಖಾನ್‌ಗೆ 6 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 58,000 ದಂಡ, ಅಝಮ್ ಖಾನ್‌ಗೆ 6 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 78,000 ರೂ. ದಂಡ ವಿಧಿಸಿತು.

ಮುಹಮ್ಮದ್ ಶರೀಫ್ ಮೊಯಿನುದ್ದೀನ್, ಆಸಿಫ್ ಅಲಿ, ಮುಹಮ್ಮದ್ ಹುಸೈನ್, ಸೈಯದ್ ಮುಜಾಹಿದ್, ನಜ್ಮುಲ್ ಹುದಾ, ಮುಹಮ್ಮದ್ ಉಬೇದುಲ್ಲಾ, ಮುಹಮ್ಮದ್ ಅಲೀಮ್, ಮುಹಮ್ಮದ್ ಅಪ್ಝಲ್, ಸೋಹೈಲ್ ಅಹ್ಮದ್‌ಗೆ ನ್ಯಾಯಾಲಯ ತಲಾ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 38,000 ರೂ. ದಂಡ ವಿಧಿಸಿತು.

ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮುಸ್ಲಿಂ ಯುವಕರನ್ನು ನೇಮಕ ಮಾಡಿ ಭಾರತದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಲು ಐಎಸ್‌ಐಎಸ್ ನಡೆಸಿದ ಪಿತೂರಿ ಆರೋಪದಲ್ಲಿ ಎನ್‌ಐಎ 2015 ಡಿಸೆಂಬರ್ 9ರಂದು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ತನಿಖೆಯ ಸಂದರ್ಭ ದೇಶಾದ್ಯಂತದ ವಿವಿಧ ನಗರಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಹಾಗೂ 19 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News