ಕೋವಿಡ್-19:ಒಂದೂವರೆ ತಿಂಗಳಲ್ಲಿ ಮೊದಲ ಬಾರಿಗೆ ಎಂಟು ಲಕ್ಷಕ್ಕಿಂತ ಕೆಳಗಿಳಿದ ಸಕ್ರಿಯ ಪ್ರಕರಣಗಳು

Update: 2020-10-17 17:03 GMT

ಹೊಸದಿಲ್ಲಿ,ಅ.17: ಒಂದೂವರೆ ತಿಂಗಳಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿಯ ಸಕ್ರಿಯ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಎಂಟು ಲಕ್ಷಕ್ಕಿಂತ ಕೆಳಗಿಳಿದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶನಿವಾರ ತಿಳಿಸಿದೆ.

‘ಭಾರತವು ಮಹತ್ವದ ಮೈಲಿಗಲ್ಲೊಂದನ್ನು ದಾಟಿದೆ. ಒಂದೂವರೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಎಂಟು ಲಕ್ಷಕ್ಕಿಂತ ಕೆಳಗಿಳಿದಿದೆ. ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಪಾಸಿಟಿವ್ ಪ್ರಕರಣಗಳ ಕೇವಲ ಶೇ.10.70ರಷ್ಟಿದೆ ’ಎಂದು ಸಚಿವಾಲಯವು ಟ್ವೀಟಿಸಿದೆ.

ಸೆಪ್ಟೆಂಬರ್ 1ರಂದು ದೇಶದಲ್ಲಿ 7,85,996 ಸಕ್ರಿಯ ಕೊರೋನ ವೈರಸ್ ಪ್ರಕರಣಗಳಿದ್ದು,ಬಳಿಕ ಸೆ.18ರವರೆಗೆ ಏರುಮುಖವಾಗಿಯೇ ಇತ್ತು. ಸೆ.18ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 10,17,754 ಆಗಿತ್ತು. ನಂತರದ ದಿನಗಳಲ್ಲಿ ಇದು ಕ್ರಮೇಣ ಇಳಿಕೆಯಾಗುತ್ತಲೇ ಇದ್ದು ಸೆ.28ರ ಬಳಿಕ ಒಂಭತ್ತು ಲಕ್ಷದ ಕೆಳಗೇ ಇತ್ತು. ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 7,95,087ಕ್ಕೆ ಇಳಿದಿದೆ.

ಕೊರೋನ ವೈರಸ್ ಸೋಂಕು ಪ್ರಕರಣಗಳಲ್ಲಿ ಚೇತರಿಕೆಯ ಪ್ರಮಾಣ ಕ್ರಮೇಣ ಹೆಚ್ಚುತ್ತಿರುವುದನ್ನೂ ಸಚಿವಾಲಯವು ಬೆಟ್ಟು ಮಾಡಿದೆ. ಪ್ರಸಕ್ತ 65,24,595 ಜನರು ಗುಣಮುಖರಾಗಿದ್ದು,ಸದ್ಯ ಚೇತರಿಕೆಯ ದರ ಶೇ.87.78ರಷ್ಟಿದೆ.

ಚೇತರಿಕೆಯ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದ್ದು,ಇದೇ ವೇಳೆ ಸಕ್ರಿಯ ಪ್ರಕರಣಗಳ ಪ್ರಮಾಣವು ಕಡಿಮೆಯಾಗುತ್ತಿದೆ ಎಂದು ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News