ಅರ್ಚಕನ ಮೇಲಿನ ದಾಳಿಯ ರಹಸ್ಯ ಭೇದಿಸಿದ ಉತ್ತರಪ್ರದೇಶ ಪೊಲೀಸರು

Update: 2020-10-18 09:07 GMT

ಲಕ್ನೊ: ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ರಾಮ ಜಾನಕಿ ದೇವಾಲಯದ ಅರ್ಚಕ ಸಾಮ್ರಾಟ್ ದಾಸ್‌ನ ಮೇಲೆ ಅ.10 ಹಾಗೂ 11ರ ಮಧ್ಯರಾತ್ರಿ ನಡೆದ ದಾಳಿಗೆ ಸಂಬಂಧಿಸಿ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಕೀಯ ಪ್ರತಿಸ್ಪರ್ಧಿಯ ಮೇಲೆ ಗಂಭೀರ ಆರೋಪ ಹೊರಿಸಲು ದೇವಾಲಯದ ಮಹಂತ ಸೀತಾರಾಮದಾಸ್, ಗ್ರಾಮದ ಮುಖ್ಯಸ್ಥ ಹಾಗೂ ಗಾಯಗೊಂಡಿರುವ ಅರ್ಚಕ ಈ ದಾಳಿಯನ್ನು ನಡೆಸುವ ಯೋಜನೆ ರೂಪಿಸಿದ್ದಾರೆ. ಮಹಂತ ಸೀತಾರಾಮದಾಸ್ ಯೋಜನೆಯ ಸೂತ್ರಧಾರನಾಗಿದ್ದು, ಸೀತಾರಾಮ ದಾಸ ಸಹಿತ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಳೆಯ ಭೂ ವಿವಾದ ವಿಚಾರಕ್ಕೆ ಸಂಬಂಧಿಸಿ ಅರ್ಚಕನ ಮೇಲೆ ದಾಳಿ ನಡೆದಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಇದೊಂದು ಪಿತೂರಿಯಾಗಿತ್ತು ಎಂದು ಈಗ ಬಯಲಾಗಿದೆ.

ಮನೋರಮಾ ಗ್ರಾಮದಲ್ಲಿರುವ ರಾಮಜಾನಕಿ ದೇವಾಲಯದ 120 ಬಿಘಾ ಭೂಮಿಗೆ ಸಂಬಂಧಿಸಿ ಗ್ರಾಮದ ಮಾಜಿ ಮುಖ್ಯಸ್ಥ ಅಮರ್ ಸಿಂಗ್ ಹಾಗೂ ಮಹಂತ ಸೀತಾರಾಮ ದಾಸ್ ನಡುವೆ ವೈಮನಸ್ಸು ಇತ್ತು. ಅಮರ್ ಸಿಂಗ್ ಹಾಗೂ ಈಗಿನ ಗ್ರಾಮ ಪ್ರಧಾನ ವಿನಯ ಸಿಂಗ್ ನಡುವೆಯೂ ರಾಜಕೀಯ ವೈಷಮ್ಯವಿತ್ತು. ಸೀತಾರಾಮದಾಸ್ ಹಾಗೂ ವಿನಯ ಸಿಂಗ್ ಅವರು ಅಮರ್ ಸಿಂಗ್ ವಿರುದ್ಧ ಗಂಭೀರ ಆರೋಪ ಹೊರಿಸಲು ಈ ಪಿತೂರಿ ಯೋಜಿಸಿದ್ದರು. ಮಹಂತ ಸೀತಾರಾಮದಾಸ್ ಅವರು ಅಮರ್ ಸಿಂಗ್ ಸಹಿತ ನಾಲ್ವರ ವಿರುದ್ಧ ಕೊಲೆಯತ್ನ ಪ್ರಕರಣವನ್ನು ದಾಖಲಿಸಿದ್ದರು. ಇಬ್ಬರನ್ನು ಬಂಧಿಸಲಾಗಿದೆ.

ಕಳೆದ ವಾರ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ ಅರ್ಚಕ ಅತುಲ್ ತ್ರಿಪಾಠಿ ಅಲಿಯಾಸ್ ಸಾಮ್ರಾಟ್ ದಾಸ್ ಪ್ರಸ್ತುತ ಲಕ್ನೊದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಭಾರೀ ಸವಾಲು ಹುಟ್ಟುಹಾಕಿತ್ತು. ರಾಜ್ಯ ಸರಕಾರವು ತೀವ್ರ ಟೀಕೆಗೆ ಗುರಿಯಾಗಿತ್ತು. ಅಯೋಧ್ಯೆಯ ಸಂತರು ಸಹ ಗೊಂಡಾ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದರು. ಆರೋಪಿಗಳ ವಿರುದ್ಧ ತ್ವರಿತವಾಗಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತಿನ್ ಬನ್ಸಾಲ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ಅವರು, ಅಕ್ಟೋಬರ್ 10 ರಂದು ರಾತ್ರಿ ಗ್ರಾಮದ ಶ್ರೀರಾಮ ಜಾನಕಿ ದೇವಸ್ಥಾನದಲ್ಲಿ ಗುಂಡು ಹಾರಿಸಿದ ಪ್ರಕರಣದಲ್ಲಿ ಸಾಮ್ರಾಟ್ ದಾಸ್ ಗಾಯಗೊಂಡಿದ್ದರು.ಈ ಗುಂಡಿನ ದಾಳಿ ಒಂದು ಪಿತೂರಿಯಾಗಿತ್ತು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News