ಸುಳ್ಳುಗಳ ಬದಲು ಸತ್ಯದ ಆಯ್ಕೆ: ಬಿಹಾರ ಮತದಾರರಿಗೆ ಪಿ.ಚಿದಂಬರಂ ಕರೆ

Update: 2020-10-18 14:25 GMT

ಹೊಸದಿಲ್ಲಿ,ಅ.18: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬಿಡೆನ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಸಂಸದ ಪಿ.ಚಿದಂಬರಂ ಅವರು ‘ಭೀತಿಯ ಬದಲು ವಿಶ್ವಾಸ, ವಿಭಜನೆಯ ಬದಲು ಏಕತೆ ಮತ್ತು ಸುಳ್ಳುಗಳ ಬದಲು ಸತ್ಯವನ್ನು ಆಯ್ಕೆ ಮಾಡುವಂತೆ ಬಿಹಾರದ ಮತದಾರರನ್ನು ಆಗ್ರಹಿಸಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗಾಗಿ ಅ.28ರಿಂದ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ.

ರವಿವಾರ ತನ್ನ ಮೂರು ಸರಣಿ ಟ್ವೀಟ್‌ ಗಳಲ್ಲಿ ಬಿಡೆನ್ ಅವರ ಪುನರಾವರ್ತಿತ ಹೇಳಿಕೆಯನ್ನು ಉಲ್ಲೇಖಿಸಿರುವ ಚಿದಂಬರಂ,ಅಂತಹುದೇ ಪಣವನ್ನು ತೊಡುವಂತೆ ದೇಶಾದ್ಯಂತ ಜನರನ್ನು ಕೋರಿಕೊಂಡಿದ್ದಾರೆ.

‘ಭೀತಿಯ ಬದಲು ವಿಶ್ವಾಸವನ್ನು, ವಿಭಜನೆಯ ಬದಲು ಏಕತೆಯನ್ನು, ಕಲ್ಪನೆಯ ಬದಲು ವಿಜ್ಞಾನವನ್ನು ಮತ್ತು ಸುಳ್ಳುಗಳ ಬದಲು ಸತ್ಯವನ್ನು ನಾವು ಆಯ್ಕೆ ಮಾಡೋಣ ಎಂದು ಬಿಡೆನ್ ಶನಿವಾರ ಹೇಳಿದ್ದಾರೆ ’ ಎಂದು ಟ್ವೀಟ್‌ನಲ್ಲಿ ತಿಳಿಸಿರುವ ಚಿದಂಬರಂ, ಇದೊಂದು ಒಳ್ಳೆಯ ಪ್ರತಿಜ್ಞೆಯಾಗಿದೆ. ಸದ್ಯವೇ ಮತಗಟ್ಟೆಗಳಿಗೆ ತೆರಳಲಿರುವ ಬಿಹಾರ, ಮಧ್ಯಪ್ರದೇಶ ಮತ್ತು ದೇಶದ ಇತರ ಕಡೆಗಳ ಮತದಾರರು ಇಂತಹುದೇ ಪ್ರತಿಜ್ಞೆಯನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.

ನ್ಯೂಝಿಲ್ಯಾಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜಸಿಂಡಾ ಆರ್ಡೆರ್ನ್ ಅವರ ಮಧ್ಯ-ಎಡಪಂಥೀಯ ಸರಕಾರವು ಅಭೂತಪೂರ್ವ ಬಹುಮತವನ್ನು ಗೆದ್ದುಕೊಂಡಿರುವುದನ್ನೂ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಅವರು,ಸಭ್ಯತೆ ಮತ್ತು ಪ್ರಗತಿಪರ ಮೌಲ್ಯಗಳು ಚುನಾವಣೆಯಲ್ಲಿ ಗೆಲುವನ್ನು ತರುತ್ತವೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್-ನವಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲದೆ ಮಧ್ಯಪ್ರದೇಶದ 28 ಕ್ಷೇತ್ರಗಳು ಸೇರಿದಂತೆ 12 ರಾಜ್ಯಗಳ 56 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News