ಸಿಂಧಿಯಾ ರ‍್ಯಾಲಿಯ ವೇಳೆಯೇ ರೈತನ ನಿಧನ, ಬಿಜೆಪಿ ನಡೆಯನ್ನು ಟೀಕಿಸಿದ ಕಾಂಗ್ರೆಸ್

Update: 2020-10-18 17:43 GMT

ಭೋಪಾಲ್: ಬಿಜೆಪಿಯ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ ಭಾಷಣ ಮಾಡಬೇಕಾಗಿದ್ದ ಮಧ್ಯಪ್ರದೇಶದ ರ‍್ಯಾಲಿಯ ವೇಳೆಯೇ ರೈತನೊಬ್ಬ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ವರದಿ ಮಾಡಿದೆ.

ರವಿವಾರ ಖಾಂಡ್ವಾ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಗೆ ಬಂದಿದ್ದ 70ರ ವಯಸ್ಸಿನ ಜಿವಾನ್ ಸಿಂಗ್ ಎಂಬ ರೈತ ಕುರ್ಚಿಯಲ್ಲಿ ಕುಳಿತ್ತಿದ್ದಾಗಲೇ ಪ್ರಾಣಪಕ್ಷಿ ಹಾರಿಹೋಗಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಏನೂ ಪ್ರಯೋಜನವಾಗಲಿಲ್ಲ.

ರೈತ ಮೃತಪಟ್ಟ ಸಮಯದಲ್ಲಿ ಸ್ಥಳೀಯ ನಾಯಕರು ಭಾಷಣ ಮಾಡುತ್ತಿದ್ದರು. ಸಿಂಧಿಯಾ ವೇದಿಕೆಗೆ ಏರಿದಾಗ ರೈತ ಮೃತಪಟ್ಟ ಸುದ್ದಿ ತಿಳಿಸಲಾಯಿತು. ಆದರೆ ಅವರು ಒಂದು ನಿಮಿಷ ವೌನ ಪ್ರಾರ್ಥನೆ ಮಾಡಿ ಭಾಷಣ ಮಾಡಲು ಮುಂದಾದರು.

 ರೈತನೊಬ್ಬ ಸಾವನ್ನಪ್ಪಿದ ಬಳಿಕವೂ ಸಾರ್ವಜನಿಕ ಸಭೆಯನ್ನು ಮುಂದುವರಿಸಿದ್ದ ಬಿಜೆಪಿಯ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.

ರೈತ ಕುರ್ಚಿಯಲ್ಲಿ ಕುಳಿತ್ತಿದ್ದಾಗಲೇ ಮೃತಪಟ್ಟ ವೀಡಿಯೊವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಗೌರವ್ ಪಾಂಧಿ, "ವೃದ್ದ ರೈತರೊಬ್ಬರು ಸಿಂಧಿಯಾ ರ‍್ಯಾಲಿಯ ವೇಳೆ ಮೃತಪಟ್ಟಿದ್ದಾರೆ. ರೈತನನ್ನು ಆಸ್ಪತ್ರೆಗೆ ದಾಖಲಿಸುವ ಬದಲಿಗೆ ರ‍್ಯಾಲಿಯನ್ನು ಮುಂದುವರಿಸಿದ್ದಾರೆ'' ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News