ಲಾಕ್‌ಡೌನ್ ಸದ್ವಿನಿಯೋಗ: ಮಾವಿನಕಟ್ಟೆ ಶಾಲೆಗೆ ಹೊಸಕಳೆ ತಂದ ಹಳೆ ವಿದ್ಯಾರ್ಥಿಗಳು

Update: 2020-10-19 06:36 GMT

ಬಂಟ್ವಾಳ, ಅ.19: ಕೋವಿಡ್-19 ಭೀತಿ ಯಿಂದ ಅಲ್ಲಿಲ್ಲಿ ಅಲೆದಾಡದೆ ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿಯನ್ನು ಸದುಪಯೋಗ ಪಡಿಸಿಕೊಂಡ ಯುವಜನರ ತಂಡವೊಂದು ತಾವು ಕಲಿತ ಶಾಲೆಗೆ ಚಿತ್ರ-ಚಿತ್ತಾರದೊಂದಿಗೆ ಹೊಸರೂಪ ನೀಡುವ ಕಾರ್ಯ ಮಾಡಿದೆ.

ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯಲ್ಲಿ ರುವ ದ.ಕ. ಜಿಪಂ ಹಿರಿಯ ಸರಕಾರಿ ಪ್ರಾಥಮಿಕ ಶಾಲೆಯ ಸುಮಾರು 25ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳ ತಂಡವು ವರ್ಲಿ ಕಲೆಯ ಮೂಲಕ ತಾವು ಕಲಿತ ಶಾಲೆಯನ್ನು ಆಕರ್ಷಕಗೊಳಿಸಿದ್ದಾರೆ.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ, ಚಿತ್ರ ಕಲಾವಿದ ಅವಿನಾಶ್ ಬದ್ಯಾರ್ ನೇತೃತ್ವದಲ್ಲಿ ಕೊರೋನ ಲಾಕ್‌ಡೌನ್ ಸಂದರ್ಭ ಜತೆಯಾದ ಈ ಯುವ ತಂಡ ತಾವು ಕಲಿತ ಪ್ರಾಥಮಿಕ ಶಾಲೆಗೆ ಕಲೆಯ ಸೊಬಗಿನೊಂದಿಗೆ ಸುಂದರ ರೂಪ ನೀಡುವ ಯೋಜನೆ ರೂಪಿಸಿತು.
 ಚಿತ್ರ ಕಲಾವಿದರು, ಆಸಕ್ತ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 25ಕ್ಕೂ ಅಧಿಕ ಮಂದಿ ಅವಿನಾಶರ ಕಲ್ಪನೆಯ ಕನಸಿಗೆ ಸಾಥ್ ನೀಡಿ ದರು. ಕುಂಚ ಹಿಡಿದು ತಾವು ಕಲಿತ ಶಾಲೆಯ ಗೋಡೆಯ ಮೇಲೆ ಹಳೆಯ ನೆನಪುಗಳೊಂದಿಗೆ ಹೊಸ ಕಲಾಕೃತಿಗಳನ್ನು ರಚಿಸಿದರು. ತಿಂಗಳ ಕಾಲ ನಡೆದ ಯುವ ತಂಡದ ಪ್ರಯತ್ನದ ಫಲವಾಗಿ ಶಾಲೆ ಹೊಸಬಣ್ಣದ ಸೊಗಡಿನೊಂದಿಗೆ ಹೊಸ ರೂಪ ಪಡೆ ಯಿತು. ವರ್ಲಿ ಕಲೆಯ ಚಿತ್ರ ಚಿತ್ತಾರದೊಂದಿಗೆ ಶಿವನಗರ ಶಾಲೆ ಅಂದಚೆಂದವಾಗಿ ಕಂಗೊಳಿಸಿತು. ಹಳೆಯ ನೆನಪು ಗಳನ್ನು ಹೊತ್ತ ಕಂಬಗಳು, ಗೋಡೆಗಳು ಈಗ ಇನ್ನಷ್ಟು ಹೊಸ ಕತೆಗಳನ್ನು ಹೊತ್ತು ಮೆರೆಯುತ್ತಿದೆ.

ಶಾಲಾ ಹೊರಾಂಗಣದಲ್ಲಿ ವರ್ಲಿ ಕಲೆ ಯಲ್ಲಿ ಮೂಡಿಬಂದ ತುಳುನಾಡಿನ ಸಂಸ್ಕೃತಿ, ಆಚರಣೆ, ಆರಾಧನೆ, ಜನಪದ ಸೊಗಡಿನ ಆಕೃತಿಗಳು ಹಾಗೂ ಹಾಲ್‌ನಲ್ಲಿ ಮೈದಳೆದ ಭಾರತಮಾತೆ ಮತ್ತು ಶ್ರೀ ಶಾರದಾಂಬೆಯ ಕಲಾಕೃತಿಗಳು ಮನಮೋಹಕವಾಗಿದೆ. ಹಿರಿ-ಕಿರಿಯ ಪ್ರತಿಭೆಗಳ ಈ ವಿನೂತನ ಸಾಹಸಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


ಸರಕಾರಿ ಶಾಲೆಗಳ ಆಗು-ಹೋಗುಗಳ ಜವಾಬ್ದಾರಿ ಆ ಊರಿನ ಜನರದ್ದು, ಹಳೆ ವಿದ್ಯಾರ್ಥಿಗಳದ್ದು. ಆ ಕಾಳಜಿಯೊಂದಿಗೆ ನಾವು ಲಾಕ್‌ಡೌನ್ ಸಮಯದಲ್ಲಿ ಈ ಕಾರ್ಯಕ್ಕೆ ಮುಂದಾದೆವು. ಶಾಲೆಯಲ್ಲಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಅದಕ್ಕೆ ಬೇಕಾದ ಪೂರಕ ವಾತಾವರಣವಿರಬೇಕು ಎನ್ನುವ ಆಶಯ ಈ ಯೋಜನೆಯ ಹಿಂದಿದೆ. ಇದು ಶಾಲೆಯ ಎಳೆಯ ಮನಸುಗಳ ಮೇಲೆ ಸ್ವಲ್ಪಮಟ್ಟಿಗಾದರೂ ಪರಿಣಾಮ ಬೀರಿದರೆ ನಮ್ಮ ಪರಿಶ್ರಮ ಸಾರ್ಥಕ.
-ಅವಿನಾಶ್ ಬದ್ಯಾರ್, ಕಲಾವಿದ


ನಮ್ಮ ಶಾಲಾ ಹಳೆ ವಿದ್ಯಾರ್ಥಿಗಳ ಪರಿಶ್ರಮದಿಂದ ಶಾಲೆ ಸುಂದರವಾಗಿದೆ. ಅಳಿವಿನಂಚಿನಲ್ಲಿರುವ ಸರಕಾರಿ ಶಾಲೆಗಳನ್ನು ಉಳಿಸುವಲ್ಲಿ ಹೊಸ ಹೆಜ್ಜೆಯಾಗಿ ಅವರು ನಿರ್ವಹಿಸಿದ ಕಾರ್ಯ ಶ್ಲಾಘನೀಯ.
-ಲಕ್ಷ್ಮೀ ಶೆಟ್ಟಿ, ಶಾಲಾ ಶಿಕ್ಷಕಿ

Writer - ಬರಹ: ಗೋಪಾಲ ಅಂಚನ್

contributor

Editor - ಬರಹ: ಗೋಪಾಲ ಅಂಚನ್

contributor

Similar News