ಮಂಗಳೂರಿನಲ್ಲಿ ಎಂಟು ಮಾರುಕಟ್ಟೆಗಳು ಆರಂಭವಾಗಿದ್ದು ಕಾಂಗ್ರೆಸ್ ಅವಧಿಯಲ್ಲಿ: ಅಬ್ದುಲ್ ರವೂಫ್

Update: 2020-10-19 08:54 GMT

ಮಂಗಳೂರು, ಅ.19: ‘‘ನಗರದ ಅಳಕೆ ಮಾರುಕಟ್ಟೆ ಉದ್ಘಾಟನೆ ಸಂದರ್ಭ ಹಿಂದಿನ ಅವಧಿಯಲ್ಲಿ ನಡೆದಿರುವುದು ಕೇವಲ ಶಿಲಾನ್ಯಾಸ ಮಾತ್ರ ಎಂಬುದಾಗಿ ಮಂಗಳೂರು ದಕ್ಷಿಣ ಶಾಸಕರು ನೀಡಿರುವ ಹೇಳಿಕೆ ಅಪ್ಪಟ್ಟ ಸುಳ್ಳು’’ ಎಂದು ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ರವೂಫ್ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಳಕೆ ಮಾರುಕಟ್ಟೆ ಮಾತ್ರವಲ್ಲದೆ ಸುರತ್ಕಲ್, ಕಾವೂರು, ಉರ್ವಾ, ಜೆಪು, ಬಿಜೈ, ಕಂಕನಾಡಿ ಹಾಗೂ ಕದ್ರಿ ಸೇರಿ 8 ಮಾರುಕಟ್ಟೆಗಳಿಗೆ 2017ರಲ್ಲಿಯೇ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿತ್ತು ಎಂದರು.

ರಾಜಕೀಯ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಸಹಜ. ಆದರೆ ಶಾಸಕರಾದವರು ವಿಪಕ್ಷವನ್ನೂ ವಿಶ್ವಾಸಕ್ಕೆ ಪಡೆಯದೆ ಈ ರೀತಿಯಾಗಿ ಜನರನ್ನು ದಾರಿತಪ್ಪಿಸುವ ಹೇಳಿಕೆ ನೀಡಬಾರದು. ಶಾಸಕರಾಗಿ ಮೂರು ವರ್ಷಗಳಲ್ಲಿ ಯಾವುದೇ ಹೊಸ ಯೋಜನೆಗಳನ್ನು ತಂದಿಲ್ಲ. ನಮ್ಮ ಆಡಳಿತ ಅವಧಿಯಲ್ಲಿ ಆರಂಭಿಸಿದ ಕೆಲಸ ಕಾರ್ಯಗಳನ್ನೇ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. 2017ರ ಪ್ರೀಮಿಯಂ ಎಫ್‌ಎಆರ್‌ನಲ್ಲಿ 121 ಕೋಟಿ ರೂ.ಗಳ 87 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕ್ರಿಯಾ ಯೋಜನೆ ರೂಪಿಸಿ ಕೌನ್ಸಿಲ್‌ನಲ್ಲಿ ಅನುಮೋದನೆ ಪಡೆಯಲಾಗಿತ್ತು. ಸುರತ್ಕಲ್ ಮಾರುಕಟ್ಟೆಗೆ ಸಂಬಂಧಿಸಿ 60 ಕೋಟಿ ರೂ.ಗಳ ಯೋಜನೆಗೆ ಸರಕಾರದಿಂದ 20 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಅಂದಿನ ಅಲ್ಲಿನ ಶಾಸಕರು ಕಾಮಗಾರಿ ಆರಂಭಿಸಿದ್ದರು. ಇದೀಗ ಕಾಮಗಾರಿ ನಿಂತಿದೆ. ಬಿಜೈ ಮಾರುಕಟ್ಟೆಯನ್ನೂ ನಮ್ಮ ಅವಧಿಯಲ್ಲಿ ಪೂರ್ಣಗೊಳಿಸಲಾಗಿತ್ತು. ಅಳಕೆ ಮಾರುಕಟ್ಟೆಗೂ ನಗರೋತ್ಥಾನ ನಿಧಿಯಡಿ ಹಣ ಮಂಜೂರಾತಿ ಮಾಡಿಸಿ ಟೆಂಡರ್ ಕರೆದು ಪಾವತಿ ಮಾಡಲಾಗಿತ್ತು. ಇವೆಲ್ಲದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ನಾವು ಸಿದ್ಧ ಎಂದು ಅವರು ಸವಾಲು ಹಾಕಿದರು.

ಮೊದಲು ಸೆಂಟ್ರಲ್ ಮಾರುಕಟ್ಟೆ ಸಮಸ್ಯೆ ಬಗೆಹರಿಸಲಿ: ಶಶಿಧರ ಹೆಗ್ಡೆ
ಮಾರುಕಟ್ಟೆಗಳನ್ನು ಮೇಲ್ದರ್ಜೆಗೇರಿಸುವುದು ಬಿಡಿ, ಮೊದಲು ಮನಪಾ ಬಿಜೆಪಿ ಆಡಳಿತ ಸೆಂಟ್ರಲ್ ಮಾರುಕಟ್ಟೆ ಸಮಸ್ಯೆ ಬಗೆಹರಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಿ ಎಂದು ಮನಪಾ ಹಿರಿಯ ಸದಸ್ಯ ಶಶಿಧರ ಹೆಗ್ಡೆ ಸವಾಲೆಸೆದರು.

ಕೊರೋನ ಸಂದರ್ಭ ಸರಿಯಾದ ಯೋಜನೆಯನ್ನೇ ಮಾಡದೆ ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ಪಡೆಯದೆ ಅವರ ಭಾವನೆಗಳಿಗೆ ಧಕ್ಕೆ ಮಾಡುವ ರೀತಿಯಲ್ಲಿ ಮಾರುಕಟ್ಟೆ ಬಂದ್ ಮಾಡಲಾಗಿತ್ತು. ನಮ್ಮ ಅವಧಿಯಲ್ಲಿ ನಗರದ ಎಂಟು ಮಾರುಕಟ್ಟೆಗಳ ಆರಂಭದ ಸಂದರ್ಭ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಸೆಂಟ್ರಲ್ ಮಾರುಕಟ್ಟೆ ವಿಚಾರದಲ್ಲಿ ಆರಂಭದಲ್ಲೇ ಮನಪಾದ ಬಿಜೆಪಿ ಆಡಳಿತ ವೈಫಲ್ಯ ಕಂಡಿದೆ. ನಗರದ ಅಭಿವೃದ್ಧಿಯಲ್ಲಿ ವಿಪಕ್ಷವಾಗಿ ನಾವೂ ಸಹಕಾರ ನೀಡುತ್ತೇವೆ. ಆದರೆ ಪ್ರತಿಪಕ್ಷವನ್ನು ಕಡೆಗಣಿಸಿ ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸಲಾಗುತ್ತಿದೆ. ಮೇಯರ್ ಅಸಹಾಯಕರಾಗಿದ್ದಾರೆ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯರಾ ಪ್ರವೀಣ್ ಚಂದ್ರ ಆಳ್ವ, ಎ.ಸಿ. ವಿನಯ ರಾಜ್, ಅಬ್ದುಲ್ಲತೀಫ್, ನವೀನ್ ಡಿಸೋಜ, ಕೇಶವ, ಜೆಸಿಂತಾ, ಝೀನತ್, ಅನಿಲ್ ಕುಮಾರ್, ಅಶ್ರಫ್, ಸಂಶುದ್ದೀನ್ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News